ಬೆಂಗಳೂರಿಗೆ ರಾಜಸ್ಥಾನ ರಾಯಲ್ಸ್ ಸವಾಲು 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ ೨ ಸೋಲು ಅನುಭವಿಸಿ ಕಂಗೆಟ್ಟಿರುವ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ.

೧೦ ಪಂದ್ಯಗಳಿAದ ೧೨ ಅಂಕ ಹೊಂದಿರುವ ಆರ್‌ಸಿಬಿ ಇಂದು ನಡೆಯಲಿರುವ ಪಂದ್ಯವನ್ನು ಗೆದ್ದು ಪ್ಲೆಆಫ್‌ನತ್ತ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದೆ. ಮತ್ತೊಂದೆಡೆ ಸತತ ೨ ಪಂದ್ಯಗಳಲ್ಲಿ ಸೋತಿರುವ ರಾಯಲ್ಸ್ಗೆ ಇದು ನಿರ್ಣಾಯಕ ಪಂದ್ಯವೆನಿಸಿದೆ. ಪ್ಲೆಆಫ್‌ನಲ್ಲಿ ಸ್ಥಾನಕ್ಕಾಗಿ ಪೈಪೋಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಂದು ಸೋಲು ರಾಜಸ್ಥಾನ ತಂಡದ ಲೆಕ್ಕಾಚಾರವನ್ನು ತಲೆಕೆಳಗಾಗಿಸಲಿದೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು ೨೩ ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೧ ಬಾರಿ ಗೆಲುವು ದಾಖಲಿಸಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು ೧೦ ಬಾರಿ ಗೆಲುವಿನ ಸಿಹಿ ಕಂಡಿದೆ. ಇನ್ನೆರಡು ಪಂದ್ಯಗಳ ಫಲಿತಾಂಶ ಹೊರ ಬಿದ್ದಿರಲಿಲ್ಲ. ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೦ ಪಂದ್ಯಗಳನ್ನಾಡಿ ೬ ಗೆಲುವು ಹಾಗೂ ೪ ಸೋಲುಗಳೊಂದಿಗೆ ೧೨ ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇನ್ನೊಂದು ಪಂದ್ಯ ಜಯಿಸಿದರೆ ಬಹುತೇಕ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭವಾಗಲಿದೆ. ಇನ್ನೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ೧೦ ಪಂದ್ಯಗಳನ್ನಾಡಿ ೪ ಗೆಲುವು ಹಾಗೂ ೬ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ರಾಯಲ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.