ಎರಡು ದಿನ ರಾಜ್ಯ ಪ್ರವಾಸಕ್ಕೆ ಆಗಮಿಸಿದ ಪ್ರಧಾನಿ

ಬೆಂಗಳೂರು : ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ವಿಶ್ವಯೋಗ ದಿನ ಹಿನ್ನೆಲೆ ಮೈಸೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಲಹಂಕ ವಿಮಾನಕ್ಕೆ ಮೂಲಕ ಬಂದಿಳಿದ ಮೋದಿ ಅವರನ್ನು ಥಾವರ್ ಚಂದ್ ಗೆಹ್ಲೋಟ್, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬರಮಾಡಿಕೊಂಡರು. ಎಸ್ಪಿಜಿ ಭದ್ರತೆಯಲ್ಲಿ ಐಐಎಸ್ಸಿಗೆ ಆಗಮಿಸಿದ ಮೋದಿ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತಯರು, ಅಭಿಮಾನಿಗಳು ಆಗಮಿಸಿದ್ದರು. ಐಐಎಸ್ಸಿ ಸಮೀಪ ಕಾರು ನಿಲ್ಲಿಸಿ ರಸ್ತೆಗಳಲ್ಲಿ ಜಮಾವಣೆಗೊಂಡಿದ್ದ ಅಭಿಮಾನಿಗಳತ್ತ ಮೋದಿ ಕೈ ಬೀಸಿದರು. ಈ ವೇಳೆ ಮೋದಿ ಪರ ಜಯಘೋಷ ಮೊಳಗಿತು.

ಮೆದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆ, ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ 

ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ೨೮೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಮೆದುಳು ಸಂಶೋಧನಾ ಕೇಂದ್ರವನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಬಳಿಕ ೪೨೫ ಕೋಟಿ ರೂ. ವೆಚ್ಚದಲ್ಲಿ ಐಐಎಸ್ಸಿ ಆವರಣದಲ್ಲಿ ನಿರ್ಮಾಣವಾಗಲಿರುವ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಗೂ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಅಲ್ಲಿಂದ ಬೇಸ್ ಕ್ಯಾಂಪಸ್‌ಗೆ ತೆರಳಿ ೨೦೧ ಕೋಟಿ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ, ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ೪೭೩೬ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ ೧೫೦ ಐಟಿಐಗಳನ್ನು ಲೋಕಾರ್ಪಣೆ ಮಾಡಿದರು.

ರಾಜ್ಯದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡ್ತೀವಿ. ಅದೇ ಕಾರಣಕ್ಕೆ ನಗರ ರೈಲು ಯೋಜನೆ, ರಸ್ತೆ, ಪ್ಲೈ ಓವರ್ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಟ್ರಾಫಿಕ್ ಮುಕ್ತ ಸಿಟಿ ಮಾಡೋದೇ ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಮೈಸೂರು ಪೇಟ ಧರಿಸಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿಗೆ ಜನರು ಜೈಕಾರ ಹಾಕಿದರು. ಈ ವೇಳೆ ಸುಮಾರು ೩೧೭ ಕೋಟಿ ವೆಚ್ಚದ ಸರ್.ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಲೋಕಾರ್ಪಣೆ, ೧೨೮೭ ಕೋಟಿ ವೆಚ್ಚದ ಕೊಂಕಣ ರೈಲು ಮಾರ್ಗದ ಶೇ.೧೦೦ ರಷ್ಟು ವಿದ್ಯುದೀಕರಣ ಯೋಜನೆ ಲೋಕಾರ್ಪಣೆ,೭೫೮ ಕೋಟಿ ವೆಚ್ಚದ ಅರಸೀಕೆರೆ - ತುಮಕೂರು ಜೋಡಿ ರೈಲು ಮಾರ್ಗ ಮತ್ತು ಹೊಸ ರೈಲು ಸೇವೆಗೆ ಚಾಲನೆ, ೧,೧೦೪ ಕೋಟಿ ವೆಚ್ಚದ ಯಲಹಂಕ - ಪೆನುಕೊಂಡ ರೈಲ್ವೆ ಮಾರ್ಗದ ದ್ವಿಪಥೀಕರಣ ಹಾಗೂ ಹೊಸ ರೈಲು ಸೇವೆಗಳಿಗೆ ಮೋದಿ ಚಾಲನೆ ನೀಡಿದರು.