ದೀಪಾವಳಿಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ

ಬೆಂಗಳೂರು: ದೀಪಾವಳಿ ಹಬ್ಬದ ವೇಳೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆ ಸಫಾರಿ ಆರಂಭವಾಗಲಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

ಉದ್ಯಾನಕ್ಕೆ ಗುರುವಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬನ್ನೇರುಘಟ್ಟ ಉದ್ಯಾನದ ೧೨ ಹೆಕ್ಟೇರ್ ಪ್ರದೇಶದ ಮೃಗಾಲಯದಲ್ಲಿ ನಾಗರಹಾವು , ಪ್ಯಾಂಥರ್ಸ್, ಮೊಸಳೆ, ಕರಡಿ, ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ಹಾಗೂ ಮತ್ತು ಪಕ್ಷಿಗಳಿವೆ. ಸಿಂಹದ ಸಫಾರಿ, ಕರಡಿ ಸಫಾರಿ ಹಾಗೂ ಹುಲಿ ಸಫಾರಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರೊಂದಿಗೆ ೨ ಕೋಟಿ ರೂ. ಅನುದಾನದಲ್ಲಿ ‘ಚಿರತೆ ಸಫಾರಿ ಆರಂಭಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ದೀಪಾವಳಿ ವೇಳೆಗೆ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಹೇಳಿದರು.

‘ಚಿರತೆ ಸಫಾರಿಯನ್ನು ೫೦ ಎಕರೆ ಪ್ರದೇಶದಲ್ಲಿ ರೂಪಿಸಲಾಗುತ್ತಿದ್ದು, ಇಷ್ಟು ವಿಸ್ತೀರ್ಣದ ಸಫಾರಿ ರಾಜ್ಯದಲ್ಲೇ ಮೊದಲನೆಯದು. ಆರಂಭಿಕ ಹಂತದಲ್ಲಿ ೮ ಚಿರತೆಗಳನ್ನು ಬಿಟ್ಟು, ಪ್ರಾಯೋಗಿಕ ಸಫಾರಿ ನಡೆಸಲಾಗುವುದು. ಕಚ್ಛಾ ರಸ್ತೆ, ಕರ್ಪೂರದ ಮರ ಹೀಗೆ ಕಾಡಿನ ನೈಜತೆಯೊಂದಿಗೆ ಸಫಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ೮೦ ಲಕ್ಷ ರೂ. ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಯನ್ನೂ ಕೋಡಲಾಗಿದ್ದು, ಸಚಿವರಾದ ಆನಂದ್ ಸಿಂಗ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಜೀವಿಗಳ ಆರೋಗ್ಯ ರಕ್ಷಣೆಗೆ ಉದ್ಯಾನದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಮನವಿ ಮಾಡಲಾಗಿದೆ. ಸುಮಾರು ೭ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪಶುಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಚಿವರನ್ನು ಭೇಟಿ ಮಾಡಿ, ಒತ್ತಾಯಿಸಲಾಗಿದೆ. ಸರ್ಕಾರವೂ ನೆರವು ನೀಡುವ ಭರವಸೆ ನೀಡಿದೆ. ಉದ್ಯಾನಕ್ಕೆ ಕಾವೇರಿ ನೀರು ಪೂರೈಕೆ ಕಾಮಗಾರಿಯೂ ಶೀಘ್ರದಲ್ಲೇ ಪೂರ್ಣವಾಗಲಿದೆ ಎಂದು ವಿವರಿಸಿದರು.

ಉದ್ಯಾನದ ಪ್ರವೇಶ ಸ್ಥಳದಲ್ಲಿ ಸುಸಜ್ಜಿತ ಶಾಪಿಂಗ್ ಪ್ಲಾಜಾ ನಿರ್ಮಿಸುವ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆನೆಗಳ ಮಾವುತರ ಕುಟುಂಬ, ಪ್ರಾಣಿಪಾಲಕರ ಕುಟುಂಬದವರನ್ನು ಭೇಟಿ ಮಾಡಿ, ಕುಂದು-ಕೊರತೆ ಆಲಿಸಿದ್ದೇವೆ. ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಣಿಗಳನ್ನು ಬೇರೆ ಮೃಗಾಲಯಗಳಿಗೆ ಕಳುಹಿಸುವುದು ಹಾಗೂ ಹೊಸ ಪ್ರಾಣಿಗಳನ್ನು ಇಲ್ಲಿಗೆ ಕರೆತರಲು ಪ್ರಾಣಿ ವಿನಿಮಿಯ ಯೋಜನೆಯಡಿ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಕೊರೊನಾ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಮೃಗಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪರಿಪಾಲಿಸಲಾಗುತ್ತಿದೆ. ಮೃಗಾಲಯಗಳ ಅಭಿವೃದ್ಧಿಗೆ ಆಧ್ಯತೆ ಅನುಸಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಮೃಗಾಲಯ, ಸಫಾರಿ, ಚಿಟ್ಟೆಗಳ ಉದ್ಯಾನ, ಒಂದೇ ಕಡೆ ಆನೆಗಳ ಹಿಂಡು, ಹೀಗೆ ಕಾಡಿನ ಅನುಭವ ನೀಡುವ ಬನ್ನೇರುಘಟ್ಟ ಉದ್ಯಾನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಎಲ್.ಆರ್.ಮಹದೇವಸ್ವಾಮಿ ಮನವಿ ಮಾಡಿದ್ದಾರೆ.