ಯಾವ ಪಕ್ಷದೊಂದಿಗೂ ಹೊಂದಾಣಿ ಇಲ್ಲ: ಅರುಣ್ ಸಿಂಗ್ ಸ್ಪಷ್ಟ ಸಂದೇಶ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಎರಡು ಜಿಲ್ಲೆಗಳ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಮುಖಂಡ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉದ್ಘಾಟಿಸಿದರು.

ಹಳೇ ಮೈಸೂರು ಭಾಗದದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಈ ಸಭೆ ನಡೆಸಲಾಗಿದ್ದು, ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂಬ ಸ್ಪಷ್ಟ ಸಂದೇಶ ಸಾರಿದ ಅವರು, ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದಿದ್ದಾರೆ. 

ಸಂಘಟನೆ ಮಾಡಿ: ಕಾರ್ಯಕರ್ತರಲ್ಲಿನ ಗೊಂದಲಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಮುಂದಾಗುವಂತೆ ಅರುಣ್ ಸಿಂಗ್ ಕರೆ ನೀಡಿದ್ದಾರೆ. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ ಅರುಣ್ ಸಿಂಗ್ ಅವರನ್ನು ಜಿಲ್ಲೆಯ ಗಡಿಭಾಗದಲ್ಲಿ ಬರಮಾಡಿಕೊಂಡ ಪಕ್ಷದ ಕಾರ್ಯಕರ್ತರು, ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಹೀಗಾದರೆ ಹೇಗೆ ಪಕ್ಷ ಕಟ್ಟುವುದು ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ತಾನು ನಾಳೆಯೂ ಬರುತ್ತೇನೆ. ನಿಮ್ಮ ಯಾವ ಕೆಲಸವಾಗಬೇಕು ನನ್ನ ಗಮನಕ್ಕೆ ತನ್ನಿ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಈ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ, ಹಾಸನ ಶಾಸಕ ಪ್ರೀತಂ ಜೆ. ಗೌಡ, ವಿಧಾನ ಪರಿಷತ್ ಸದಸ್ಯ ಮುನಿರಾಜೇಗೌಡ ಮತ್ತಿತರರು ಹಾಜರಿದ್ದರು.