ಬೆಂಗಳೂರು: ೨೦೨೩ರ ಚುನಾವಣೆಯಲ್ಲಿ ೩೦ರಿಂದ ೩೫ ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲು ಇಡುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಜನತಾ ಪರ್ವ ೧.೦ ಹಾಗೂ ಮಿಷನ್ ೧೨೩ ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಹಮ್ಮಿಕೊಳ್ಳಲಾಗಿರುವ ೩ನೇ ದಿನದ ಸಂಘಟನಾ ಕಾರ್ಯಾಗಾರ ಆರಂಭವಾಗುವುದಕ್ಕೆ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಈಗಾಗಲೇ ಮೊದಲ ಹಂತದಲ್ಲಿ ೭-೮ ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ ೩೦ರಿಂದ ೩೫ ಸೀಟುಗಳನ್ನು ಮಹಿಳೆಯರಿಗೆ ಕೊಡಲಾಗುವುದು ಎಂದು ತಿಳಿಸಿದರು. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡುವ ಕೆಲಸ ಮಾಡಲಾಗುವುದು ಎಂದ ಅವರು, ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಈ ಕಾರ್ಯಾಗಾರದಿಂದ ಪ್ರಾರಂಭ ಮಾಡುತ್ತೇವೆ ಎಂದರು.
ಇದೇ ವೇಳೆ ಶಾಸಕರಾದ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಜೆಡಿಎಸ್ ರಾಜ್ಯಾಧ್ಯಕ್ಷೆಯಾದ ಲೀಲಾದೇವಿ ಆರ್. ಪ್ರಸಾದ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಈ ಕ್ಷಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸಾಕ್ಷಿಯಾದರು.