ಬೆಂಗಳೂರು : ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಮೀಸಲು ನಿಗದಿಗೆ ಹೈಕೋರ್ಟ್ ಮೂರು ತಿಂಗಳ ಡೆಡ್ ಲೈನ್ ನೀಡಿದೆ. ರಾಜ್ಯ ಸರ್ಕಾರವು ೧೨ ವಾರಗಳಲ್ಲಿ ಕ್ಷೇತ್ರ ಮರುವಿಂಗಡಣೆ ಹಾಗೂ ಒಬಿಸಿ ಮೀಸಲು ನಿಗದಿಯನ್ನು ಪೂರ್ಣಗೊಳಬೇಕೆಂದು ಹೈಕೋರ್ಟ್ ಸೂಚಿಸಿದೆ. ಇದಾದ ಒಂದು ವಾರದಲ್ಲಿ ರಾಜ್ಯ ಚುನಾವಣಾ ಆಯೋಗ ಪಂಚಾಯತಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದೆ.
ಇದರಿಂದಾಗಿ ಸುಮಾರು ಒಂದುವರೆ ವರ್ಷದಿಂದ ಖಾಲಿ ಇರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಿಗೆ ಕಾಲ ಕೂಡಿಬಂದ ಹಾಗೆ ಕಾಣ್ತಾಯಿದೆ. ಕೋರ್ಟ್ ಆದೇಶದಂತೆ ಎಲ್ಲವೂ ನಡೆದರೆ ಸೆಪ್ಟಂಬರ್‌ಗೆ ಸರ್ಕಾರ ಚುನಾವಣೆ ನಡೆಸಲೇಬೇಕಿದೆ. ಮತ್ತೆ ಗಡುವು ವಿಸ್ತರಣೆ ಮಾಡೋದಿಲ್ಲವೆಂದು ಸರಕಾರಕ್ಕೆ ಖಡಕ್ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿದೆ. ಹಾಗಾಗಿ ಈ ಬಾರಿ ಚುನಾವಣೆ ನಡೆಯೋದು ಪಕ್ಕಾ ಆದಂತಿದೆ. ಎಲ್ಲವೂ ಅಂದುಕೊಂಡಂತೆ ಮೂರು ನಾಲ್ಕು ತಿಂಗಳ ಒಳಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ನಡೆಯಲಿವೆ.
ಕಳೆದ ಒಂದೂವರೆ ವರ್ಷದಿಂದ ಮೀಸಲಾತಿ ನೆಪ ಹೇಳಿಕೊಂಡು ಚುನಾವಣೆಗಳನ್ನು ತಳ್ಳಿಕೊಂಡು ಬರಲಾಗುತ್ತಿದ್ದು, ಇದೀಗ ಸರಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.