ಶಿವಮೊಗ್ಗವನ್ನು ಗುಂಡಿಮುಕ್ತ ಮಾಡಲು ಯಮುನಾ ರಂಗೇಗೌಡ ಆಗ್ರಹ

ಶಿವಮೊಗ್ಗ: ನಗರದ ಜನತೆಯ ಬಹುದೊಡ್ಡ ಕನಸಾಗಿದ್ದ ಸ್ಮಾರ್ಟ್ ಸಿಟಿ ಯೋಜನೆ ಇದೀಗ ಅದೇ ಜನರ ಹಿಡಿಶಾಪಕ್ಕೆ ಗುರಿಯಾಗಿದೆ. ಈ ಯೋಜನೆ ನಮಗೆಲ್ಲ ವರವಾಗಿದೆ ಎಂಬ ಜನರಿಗೆ ಅದೇ ಶಾಪವಾಗಿ ಪರಿಣಮಿಸಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕಿ ಯಮುನಾ ರಂಗೇಗೌಡ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗರಿಗಳ ವಿರುದ್ಧ ಅನೇಕ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳಿಗೆ ಅದರ ಬಿಸಿ ತಟ್ಟುತ್ತಿಲ್ಲ. ನಗರದ ನೇಕಕ ಭಾಗಗಳಲ್ಲಿ ರಸ್ತೆಗಳನ್ನು ಅಗೆದು ಹಾಗೇ ಬಿಟ್ಟಿರುವುದು ನಾಗರಿಕರ ಸಾವು-ನೋವಿಗೆ ನೇರ ಕಾರಣವಾಗಿದೆ. ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ನಮ್ಮ ಶಾಸಕರು, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಯೋಜನೆಯ ಕಾಮಗಾರಿ ಅವಧಿ ಮುಗಿದರೂ ಕಾಮಗಾರಿಗಳ ಕೆಲಸ ಇನ್ನೂ ಮುಂದುವರೆದಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಶಿವಮೊಗ್ಗ ನಗರವನ್ನು ಗುಂಡಿಮುಕ್ತ ನಗರವಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.