ಬ್ಯಾಂಕ್ ಪ್ರತಿನಿಧಿಗಳಿಗೆ ಕಾರ್ಯಗಾರ 

ಶಿವಮೊಗ್ಗ : ಬಿಪಿಎಲ್ ಕುಟುಂಬದವರು ಸ್ವಂತ ಉದ್ಯೋಗ, ಇತರೆ ಆರ್ಥಿಕ ಚಟುವಟಿಕೆ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು ಅವಕಾಶ ಒದಗಿಸುವ ಎನ್‌ಆರ್‌ಎಲ್‌ಎಂನಂತಹ ಯೋಜನೆಗಳಿಗೆ ಬ್ಯಾಂಕುಗಳು ಮೊದಲನೇ ಆದ್ಯತೆ ನೀಡಿ ಸಾಲ-ಸಹಾಯಧನ ಮಂಜೂರು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.

ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಬ್ಯಾಂಕ್ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಈ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತನಾಡಿದ ಸಿಇಒ ವೈಶಾಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಗುಣಮಟ್ಟದ ಜೀವನ ನಡೆಸಬೇಕು. ಈ ಉದ್ದೇಶದಿಂದ ಸರ್ಕಾರ ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.

ಗ್ರಾಮೀಣ ಭಾಗದಲ್ಲಿ ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ಮತ್ತು ನಗರ ಭಾಗದಲ್ಲಿ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್ ಯೋಜನೆಯಡಿ ಸ್ವಸಹಾಯ ಗುಂಪು ಚಟುವಟಿಕೆ, ವೈಯಕ್ತಿಕ ಚಟುವಟಿಕೆ ನಡೆಸಲು ಸಾಲ, ಸಹಾಯಧನ, ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.