ಭದ್ರ ಮೇಲ್ದಂಡೆ ಯೋಜನೆ ಯಾವಾಗ ಪೂರ್ಣವಾಗಲಿದೆ?

ದೆಹಲಿ : ಇಲ್ಲಿ ನಡೆಯಿತ್ತಿರುವ ಲೋಕಸಭಾ ಅಧಿವೇಶನದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭದ್ರಾ ಮೇಲ್ದಂಡೆ ಯೋಜನೆಯ ಕುರಿತು ಪ್ರಶ್ನೆ ಮಾಡಿದರು. ಅಧಿವೇಶನಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಎಷ್ಟು ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. ಈಗಾಗಲೇ ಎಷ್ಟು ಖರ್ಚಾಗಿದೆ ಹಾಗೂ ಈ ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಈ ಯೋಜನೆಯಿಂದ ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಎಷ್ಟು ಎಕರೆ ಪ್ರದೇಶಗಳ ನೀರಾವರಿಗೆ ಅನುಕೂಲವಾಗಲಿದೆ ಎಂದು ಪ್ರಶ್ನಿಸಿದರು.

 ಸಂಸದರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲಶಕ್ತಿ ಸಚಿವ ಪ್ರಹ್ಲಾದ್ ಸಿಂಗ್ ಪಾಟೀಲ್, 2018-19ರ ಪ್ರಕಾರ ಈ ಯೋಜನೆಗೆ 16 ಸಾವಿರದ 125 ರೂಪಾಯಿ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ. 2023-24 ವೇಳೆಗೆ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದಾಗಿ ಚಿಕ್ಕಮಗಳೂರಿನ 44 ಸಾವಿರದ 555 ಎಕರೆ, ಚಿತ್ರದುರ್ಗದ 1ಲಕ್ಷದ 54 ಸಾವಿರದ 245 ಎಕರೆ, ತುಮಕೂರಿನ 19 ಸಾವಿರದ 215 ಎಕರೆ ಹಾಗೂ ದಾವಣಗೆರೆಯ 7 ಸಾವಿರದ 500 ಎಕರೆ ಸೇರಿದಂತೆ ಒಟ್ಟು 2 ಲಕ್ಷದ 25 ಸಾವಿರದ 515 ಎಕರೆ ಪ್ರದೇಶಗಳ ನೀರಾವರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.