ಬೆಂಗಳೂರು : ಶಾಲಾ ಕಾಲೇಜುಗಳನ್ನ ಬಂದ್ ಮಾಡೋದಿಲ್ಲ. ಬಂದ್ ಮಾಡಬಾರದು ಎಂಬ ಕಾರಣಕ್ಕಾಗಿಯೇ ಎಲ್ಲ ರೀತಿಯ ಮುಂಜಾಗೃತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ೧.೨೫ ಕೋಟಿ ವಿದ್ಯಾರ್ಥಿಗಳಲ್ಲಿ ೧೩೦ ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ತಗುಲಿದೆ. ಇದು ನಿರ್ಲಕ್ಷ್ಯ ಮಾಡುವಷ್ಟರ ಮಟ್ಟಿಗೆ ಇದೆ. ಆದರೂ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುತ್ತೇವೆ. ಈ ಸಂಬಂಧ ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಪೋಷಕರು ಎರಡು ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಿ. ನಿಮ್ಮಿಂದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ. ಪೋಷಕರು ಎರಡು ಡೋಸ್ ವ್ಯಾಕ್ಸಿನ್ ಪಡೆದಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ನಿರಾಕರಿಸುವುದಿಲ್ಲ. ಆದರೆ ಪಾಲಕರು ತಮ್ಮ ಜವಾಬ್ದಾರಿ ಅರಿಯಬೇಕು. ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನದ ಚಾಲಕ ಸಹ ಎರಡು ಡೋಸ್ ಪಡೆದುಕೊಳ್ಳುವಂತೆ ಸಚಿವ ನಾಗೇಶ್ ಮನವಿ ಮಾಡಿದ್ದಾರೆ.