ಭೀಕರವಾಗಿದೆ ಬಸ್ತಿಕೊಪ್ಪದ ಜನರ ಬದುಕು

ಸೊರಬ : ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಅಲ್ಲಿನ ಜನರ ಬದುಕು ಭೀಕರವಾಗಿದೆ. ಆರೋಗ್ಯ ಸೇರಿದಂತೆ ಹಲವು ಮೂಲಭೂತ ಸೌಕರ್ಯದ ಸಮಸ್ಯೆಗಳನ್ನು ಇಲ್ಲಿನ ಜನರು ಅನುಭವಿಸುತ್ತಿದ್ದಾರೆ. ನಿತ್ಯವೂ ಗಣಿಯಲ್ಲಿ ಸಿಡಿಯುವ ಸಿಡಿಮದ್ದಿನ ಹೊಗೆ, ಕ್ರಷರ್ ಧೂಳಿನಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಕಲ್ಲು ಗಣಿಗಾರಿಕೆಯನ್ನು ಬಂದ್ ಮಾಡಬೇಕೆಂದು ಗ್ರಾಮಸ್ಥರು ಹಾಗೂ ವೃಕ್ಷಲಕ್ಷ ಆಂದೋಲನದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಲಾಗಿದೆ. ಬಸ್ತಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳೇನು? ಈಗಾಗಲೇ ಈ ಗಣಿಗಾರಿಕೆ ಕುರಿತು ವಿಜ್ಞಾನಿಗಳು ಹಾಗೂ ತಜ್ಞರು ನೀಡಿರುವ ವರದಿಗಳೇನು? ಗ್ರಾಮಸ್ಥರ ಬೇಡಿಕೆಗಳೇನು ಅನ್ನೋದರ ಕುರಿತು ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್. 

ಕಲ್ಲು ಗಣಿಗಾರಿಕೆಯಿಂದ ಬಸ್ತಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ಬದುಕೇ ಬರಡಾಗಿದೆ. ಜನರ ಮನೆಗಳಿಂದ ಕೇವಲ ೧೦೦ ಮೀಟರ್ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ ೪೫ ರೈತ ಕುಟುಂಬಗಳಿದ್ದು ೩೦೦ ಜನ ವಾಸವಾಗಿದ್ದಾರೆ. ೨೦೦ ಅಡಿ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ದಿನಕ್ಕೆ ೨೫೦-೩೦೦ ಲಾರಿಗಳಷ್ಟು ಕಲ್ಲು ಸಾಗಾಟ ನಡೆಯುತ್ತಿದೆ.

ಇಲ್ಲಿ ಪ್ರತಿದಿನ ಸಂಜೆ ೨ ಬಾರಿ ಭಾರಿ ಸ್ಪೋಟಕಗಳನ್ನು ಸಿಡಿಸಿ ಕಲ್ಲು ಬಂಡೆಗಳನ್ನು ಸೀಳಲಾಗುತ್ತಿದೆ. ಸ್ಫೋಟಕದ ಸದ್ದು ಸುತ್ತಮುತ್ತಿಲಿನ ಮನೆಗಳನ್ನು ಅದರುವಂತೆ ಮಾಡುತ್ತಿದೆ. ಹಲವು ಮನೆಗಳ ಗೋಡೆಗಳು ಬಿರಕು ಬಂದಿವೆ. ಈಗಾಗಲೇ ಎರಡು ಕುಟುಂಬಗಳು ತಮ್ಮ ಮನೆಯನ್ನು ಬಿಟ್ಟು ಬೇರೆ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಧೂಳಿನಿಂದ ಈ ಭಾಗದ ಜನರು ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿತ್ಯವು ಭಾರಿ ವಾಹನಳು ಇಲ್ಲಿ ಓಡಾಡುವುದರಿಂದ ರಸ್ತೆಗಳು ಹಾಳಾಗಿ ಹೋಗಿವೆ. ಜನರು ವಾಹನ ಸಂಚಾರ ಮಾಡಲು ಗೋಳಾಡುವಂತಾಗಿದೆ.

ಗಣಿಗಾರಿಕೆಯಂದಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. ಈಗಾಗಲೇ ೨೦ ಬೋರ್‌ವೆಲ್‌ಗಳು ಬರಿದಾಗಿವೆ. ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಗಣಿಯ ಕಲ್ಲು ಪುಡಿ ಮಿಶ್ರಿತ ನೀರು ಕೃಷಿ ಭೂಮಿಗೆ ಬಂದು ಸೇರುತ್ತಿದೆ. ಇದರಿಂದಾಗಿ ಕೃಷಿ ಭೂಮಿ ಕೂಡ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಸರಿಯಾದ ಬೆಳೆ ಕೈಸಿಗದೇ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಗಣಿ ಬಾವಿಗಳಿಗೆ ಪ್ರಾಣಿಗಳು ಬಿದ್ದು ಸಾವನಪ್ಪುತಿವೆ.

ಅರಣ್ಯ ಇಲಾಖೆಯ ಮೂಲಕ ಚಂದ್ರಗುತ್ತಿ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯ ತಜ್ಞ  ಡಾ|| ಕೇಶವ ಹೆಚ್, ಕೊರ್ಸೆ ಅಧ್ಯಯನ ನಡೆಸಿದ್ದರು. ಬಹು ಅಪರೂಪದ ಕಲ್ಲು ಅರಣ್ಯಗಳು ಚಂದ್ರಗುತ್ತಿ ಸುತ್ತಲಿನ ಪ್ರದೇಶದಲ್ಲಿವೆ. ಇಲ್ಲಿನ ಸಸ್ಯ, ವನ್ಯಜೀವಿ ಸಂಕುಲ ಬಹಳ ಆಘಾತಕ್ಕೆ ಒಳಗಾಗಿದೆ. ಬಸ್ತಿಕೊಪ್ಪ ಗಣಿಗಾರಿಕೆ ವಿನಾಶಕಾರಿ ಆಗಿದೆ. ಆದ್ದರಿಂದ ಇದು ಸಂಪೂರ್ಣ ನಿಲ್ಲಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಕರ್ನಾಟಕ ಸರ್ಕಾರದ ಪಶ್ಚಿಮ ಘಟ್ಟ ಕಾರ್ಯ ಪಡೆ ಮೂಲಕ ಈ ಭಾಗದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅಧ್ಯಯನ ನಡೆಸಿದ್ದರು. ಈ ವೇಳೆ ಅವರು ಗಣಿಗಾರಿಕೆಯಿಂದಾಗಿ ಚಂದ್ರಗುತ್ತಿ ಸೇರಿದಂತೆ ವರದಾ ಜಲಾನಯನ ಪ್ರದೇಶ ಭಾರಿ ಹಾನಿಗೆ ಒಳಗಾಗಿದೆ. ಗಣಿಗಾರಿಕೆಯಿಂದ ಕಾನು, ಅರಣ್ಯಗಳು, ಜಲಮೂಲಗಳು ನಾಶವಾಗಿವೆ ಎಂದು ಅಭಿಪ್ರಾಯ ನೀಡಿದ್ದಾರೆ. ಇದೇ ರೀತಿ ಸಾಕಷ್ಟು ವಿಜ್ಞಾನಿಗಳು ಹಾಗೂ ತಜ್ಞರು ಗಣಿಗಾರಿಕೆಂದಾಗುವ ಹಾನಿಯ ಕುರಿತು ಎಚ್ಚರಿಸಿದ್ದಾರೆ.

ಆದ್ರೆ, ಯಾವ ವಿಜ್ಞಾನಿಗಳು, ತಜ್ಞರು ಏನೇ ಅಭಿಪ್ರಾಯ ಪಟ್ಟರು, ಏನೇ ವರದಿ ನೀಡಿದರು ಕಲ್ಲು ಗಣಿಗಾರಿಗೆ ಮಾತ್ರ ನಿಂತಿಲ್ಲ. ಆದ್ದರಿಂದ ಇಲ್ಲಿನ ಗ್ರಾಮಸ್ಥರು ವೃಕ್ಷಲಕ್ಷ ಆಂದೋಲನದ ಸಹಾಯದಿಂದ ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಇಲ್ಲಿನ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಅರಣ್ಯ, ಪರಿಸರ, ಜಲ, ಭೂಗರ್ಭ ತಜ್ಞರು, ಜೀವ ವೈವಿಧ್ಯ ತಜ್ಞರನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಬೇಕು. ಚಂದ್ರಗುತ್ತಿ ಪ್ರದೇಶದ ಸೂಕ್ಷ್ಮ ಕಲ್ಲು ಅರಣ್ಯಗಳ ಸಂರಕ್ಷಣೆ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಗಣಿಗಾರಿಕೆಗೆ ನೀಡಿದ ಒಪ್ಪಿಗೆ ಹಿಂಪಡೆಯಬೇಕು. ರಾಜ್ಯ ಗಣಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ವೈದ್ಯಕೀಯ ತಂಡವನ್ನು ಬಸ್ತಿಕೊಪ್ಪಕ್ಕೆ ಕಳುಹಿಸಬೇಕು. ಜಿಲ್ಲಾ ಪಂಚಾಯತಿಯು ಬಸ್ತಿಕೊಪ್ಪ ಗ್ರಾಮದ ಕೃಷಿ, ತೋಟಗಾರಿಕೆ ಪರಿಸ್ಥಿತಿ, ಕುಡಿಯುವ ನೀರಿನ ಸೌಲಭ್ಯ ಯೋಜನೆ ವಿಫಲತೆ ಬಗ್ಗೆ ಸ್ಥಳ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಮಾನವ ತನ್ನೆಲ್ಲ ಬಯಕೆಗಳನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ಎಗ್ಗಿಲ್ಲದೆ ದಾಳಿ ಮಾಡುತ್ತಿದ್ದಾನೆ. ಈ ದಾಳಿಯಿಂದಾಗಿ ಕೊನೆಗೆ ನೋವು ಅನುಭವಿಸುವುದು ಕೂಡ ಅದೇ ಮಾನವರು. ಸೊರಬದ ಬಸ್ತಿಕೊಪ್ಪದಲ್ಲಿ ಆಗುತ್ತಿರುವುದು ಇದೇ ಕಥೆ. ಆದರೆ ಇಲ್ಲಿ ಯಾರೋ ಮಾಡುತ್ತಿರುವ ತಪ್ಪಿಗೆ ಇನ್ಯಾರೋ ಕಷ್ಟ ಅನುಭವಿಸುತ್ತಿದ್ದಾರೆ. ಗಣಿಗಾರಿಕೆಯಿಂದಾಗಿ ಈ ಭಾಗದ ಜನರೂ ಇಲ್ಲಿ ಜೀವನ ನಡೆಸುವುದೇ ಕಷ್ಟ ಎನ್ನುವಂತಹ ಪರಸ್ಥಿತಿಗೆ ಬಂದಿದ್ದಾರೆ. ಜನಪ್ರತಿನಿಧಿಳಿಗೆ ಸಾಕಷ್ಟು ಭಾರಿ ಸಮಸ್ಯೆಯ ಕುರಿತು ಹೇಳಿಕೊಂಡಿದ್ದರು ಕೂಡ ಯಾರೂ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿಯೇನೋ ಕೊಟ್ಟಿದ್ದಾರೆ. ಅವರು ಭರವಸೆಯನ್ನೂ ಕೊಟ್ಟಿದ್ದಾರೆ. ಆದರೆ ಆ ಭರವಸೆ ಕಾರ್ಯ ರೂಪಕ್ಕೆ ಬರುತ್ತಾ ಅಂತ ಕಾದುನೋಡಬೇಕಿದೆ. 

ಬ್ಯೂರೋ ರಿಪೊರ್ಟ್ ಕನ್ನಡ ಮೀಡಿಯಂ ೨೪*೭