ಶಿವಮೊಗ್ಗ : ಶಿವಮೊಗ್ಗದ ಪ್ರೇಕ್ಷಣೀಯ ಸ್ಥಳಗಳು ಎಂದಾಕ್ಷಣ ತಕ್ಷಣ ನೆನಪಿಗೆ ಬರುವ ಹೆಸರುಗಳಲ್ಲಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ಕೂಡ ಒಂದು. ಶಿವಮೊಗ್ಗಕ್ಕೆ ಬಂದ ಪ್ರವಾಸಿಗರು ಅದರಲ್ಲೂ ಪ್ರಾಣಿ ಪ್ರೀಯರಂತೂ ಇಲ್ಲಿಗೆ ಖಂಡಿತವಾಗಿ ಭೇಟಿ ನೀಡೆ ನೀಡ್ತಾರೆ. ಇದೀಗ ಹುಲಿ ಮತ್ತು ಸಿಂಹಧಾಮವು ಹೊಸ ಹೊಸ ರೂಪವನ್ನು ಪಡೆದುಕೊಂಡು ಇನ್ನು ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ. ಹಾಗಿದ್ರೆ ಅಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಯಾದರೂ ಏನು? ಅದರ ವಿಶೇಷತೆಯೇನು? ಅನ್ನೋದರ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಹುಲಿ ಮತ್ತು ಸಿಂಹಧಾಮವು ಪ್ರವಾಸಿಗರನ್ನು ಆಕರ್ಷಿಸಲು ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಎಲ್ಲಾ ರೀತಿಯಲ್ಲಿಯೂ ಹೈಟೆಕ್ ಆಗಿ ಅಭಿವೃದ್ಧಿ ಹೊಂದುತ್ತಿದೆ. ಇದೀಗ ದೇಶದಲ್ಲಿಯೇ ಎಲ್ಲೂ ಇಲ್ಲದ ಅಪರೂಪದ ಸಫಾರಿ ಅನುಭವವನ್ನು ಪ್ರವಾಸಿಗರಿಗೆ ನೀಡಲು ಭರದಿಂದ ಕೆಲಸ ನಡೆಯುತ್ತಿದೆ. ಹಾಗಿದ್ರೆ ಯಾವುದು ಆ ಸಫಾರಿ? ಅದರ ವಿಶೇಷತೆಗಳು ಏನು?
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ದೇಶದಲ್ಲಿಯೇ ಮೊದಲ ಕಾಟಿ ಸಫಾರಿ ಸಿದ್ಧವಾಗುತ್ತಿದೆ. ಸಿಂಹ, ಹುಲಿ ಸೇರಿದಂತೆ ಕಾಡುಪ್ರಾಣಿಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕಾಟಿಗಳನ್ನು ವೀಕ್ಷಿಸುವ ಸದಾವಕಾಶ ಸದ್ಯದಲ್ಲಿಯೇ ದೊರಕಲಿದೆ. ಇನ್ನು ಕೆಲವೇ ದಿನಗಳಲ್ಲಿ ಮೈಸೂರಿನಿಂದ 21 ಕಾಟಿಗಳು ತ್ಯಾವರೆಕೊಪ್ಪಕ್ಕೆ ಆಗಮಿಸಲಿವೆ. ಇವುಗಳಲ್ಲಿ ಎಂಟು ಕಾಡುಕೋಣ ಹಾಗೂ 13 ಕಾಡೆಮ್ಮೆಗಳು ಇರಲಿವೆ. 25 ಹೆಕ್ಟೇರ್‌ನಲ್ಲಿ 2.40 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಟಿ ಸಫಾರಿ ರೆಡಿಯಾಗ್ತಾಯಿದೆ.
ಭಾರತೀಯ ಮೃಗಾಲಯ ಪ್ರಾಧಿಕಾರಕ್ಕೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 18 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಕರ್ನಾಟಕ ಶಿವಮೊಗ್ಗ ಹಾಗೂ ಮಹಾರಾಷ್ಟ್ರದ ಮೃಗಾಲಯಕ್ಕೆ ಅನುಮೋದನೆ ನೀಡಲಾಗಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಸುಂದರವಾದ ಮೃಗಾಲಯ ಹಾಗೂ ಸಫಾರಿ ಮಾಡಲು ಸಾಧ್ಯವಾಗಿದೆ. ಈಗಾಗಲೇ ಕಾಟಿ ಸಫಾರಿ ಕಾಮಗಾರಿ ಆರಂಭವಾಗಿದ್ದು, ಸುತ್ತಲು ಫೆನ್ಸಿಂಗ್ ಅಳವಡಿಸಲಾಗಿದೆ. ಇನ್ನು ಸಫಾರಿ ವಾಹನದಲ್ಲಿ ಕೂತು ಕಾಟಿಗಳನ್ನು ವೀಕ್ಷಿಸುವ ಸೌಲಭ್ಯ ಸದ್ಯದಲ್ಲಿಯೇ ಸಿಗಲಿದೆ.
ಪ್ರವಾಸಿಗರಿಗೆ ದೈತ್ಯ ದೇಹದ ಕಾಟಿಗಳನ್ನು ಸಫಾರಿ ಮೂಲಕ ಹತ್ತಿರದಿಂದ ನೋಡುವ ಖುಷಿ ಬೇರೆಯದೇ ಅನುಭವ ನೀಡಲಿದೆ. ಅದರಲ್ಲೂ ದೇಶದಲ್ಲಿ ಎಲ್ಲಿಯೂ ಇಲ್ಲದ ಇಂತಹ ಸಫಾರಿ ಶಿವಮೊಗ್ಗ ಜಿಲ್ಲೆಯ ಮೃಗಾಲಯದಲ್ಲಿ ಆರಂಭವಾಗುತ್ತಿರುವುದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇನ್ನಷ್ಟು ಬಲ ತುಂಬಲಿದೆ.
ಒಟ್ಟಾರೆ ಸಾಕಷ್ಟು ಅಭಿವೃದ್ಧಿ ಹೊಂದುತ್ತಿರುವ ಹುಲಿ ಮತ್ತು ಸಿಂಹಧಾಮವು ಹೊಸ ಹೊಸ ರೂಪದಲ್ಲಿ ಸಿದ್ಧವಾಗುತ್ತಿದೆ. ಪ್ರವಾಸಿಗರು ಒಮ್ಮೆ ಇಲ್ಲಿಗೆ ಎಂಟ್ರಿ ಕೊಟ್ಟರೆ ಅರ್ಧ ದಿನ ಕಳೆಯುವಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದರಲ್ಲೂ ದೇಶದಲ್ಲಿಯೇ ಪ್ರಥಮ ಕಾಟಿ ಸಫಾರಿ ಯೋಜನೆಯಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬ್ಯೂರೋ ರಿಪೋರ್ಟ್ ಕನ್ನಡ ಮೀಡಿಯಂ 24*7