ಶಿವಮೊಗ್ಗ ಜಿಲ್ಲೆಯ ಮಳೆ ಅಪ್ಡೇಟ್ಸ್

ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ರೂ ತುಂಗಾ ಜಲಾನಯನ ಪ್ರದೇದಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಗಾಜನೂರು ಬಳಿಯ ತುಂಗಾ ಜಲಾಶಯದಿಂದ ೫೨, ೫೨೫ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. 

ಲಿಂಗನಮಕ್ಕಿ, ಭದ್ರಾ ಜಲಾಶಯದಲ್ಲಿಯೂ ಹೆಚ್ಚಿದ ನೀರು

ಮಳೆರಾಯನ ಅಬ್ಬರಕ್ಕೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗ್ತಾಯಿದೆ. ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೬ ಅಡಿಯಿದ್ದು ೧೬೩. ೯ ಅಡಿಗಳಷ್ಟು ನೀರು ತುಂಬಿದೆ. ೩೧ ಸಾವಿರದ ೬೬೭ ಕ್ಯೂಸೆಕ್ ನೀರು ಒಳ ಹರಿವಿದ್ದು ೧೩೯ ಕ್ಸೂಸೆಕ್ ಹೊರ ಹರಿವಿದೆ. ಅದೇ ರೀತಿ ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ ೧೮೧೯ ಅಡಿಯಿದ್ದು ೧೭೬೯.೦೫ ಅಡಿಗಳಷ್ಟು ನೀರು ತುಂಬಿದೆ. ೫೭ ಸಾವಿರದ ೬೩೮ ಕ್ಯೂಸೆಕ್ ನೀರು ಒಳ ಹರಿವಿದ್ದು ೨೪೪೪.೬೮ ಕ್ಯೂಸೆಕ್ ಹೊರ ಹರಿವಿದೆ. 

ನದಿಯ ಭವ್ಯ ದೃಶ್ಯದೊಂದಿಗೆ ಸೆಲ್ಫಿ, ಫೋಟೋ

ಶಿವಮೊಗ್ಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ರಭಸವಾಗಿ ಹರಿಯುವ ತುಂಗಾ ನದಿಯನ್ನು ಕಣ್‌ತುಂಬಿಕೊಳ್ಳಲು ಜನರು ಸೇತುವೆ ಮೇಲೆ ಜಮಾಯಿಸ್ತಾಯಿದ್ದಾರೆ. ಮೈದುಂಬಿ ಹರಿಯುತ್ತಿರುವ ತುಂಗೆಗೆ ಹಿರಿಯರು ಬಾಗಿನ ರೂಪದಲ್ಲಿ ಅಡಿಕೆ, ವೀಳ್ಯದೆಲೆಯನ್ನು ಅರ್ಪಿಸಿದ್ದಾರೆ. ಅದೇ ರೀತಿ ನದಿಯ ಬೋರ್ಗರೆತವನ್ನು ತೋರಿಸಲು ಪೋಷಕರು ಮಕ್ಕಳನ್ನು ಕರೆದುಕೊಂಡು ಬಂದು ತುಂಗಾ ನದಿಯನ್ನು ತೋರಿಸುವ ಹಾಗೂ ಸೇತುವೆ ಮೇಲೆ ನಿಂತು ನದಿಯೊಟ್ಟಿಗೆ ಸೆಲ್ಫಿಯನ್ನು ತೆಗೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿತು.