ಶಿವಮೊಗ್ಗ : ಮಹಾನಗರ ಪಾಲಿಕೆಯು ೨೦೨೧ರ ತೆರಿಗೆ ಬದಲಾವಣೆಯನ್ನು ಕಾನೂನು ಬದ್ಧವಾಗಿ ಅನುಷ್ಠಾನಗೊಳಿಸಿಲ್ಲ. ಇದರಿಂದಾಗಿ ತೆರಿಗೆದಾರರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆ ಮುಂದಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ೬.೩೦ಕ್ಕೆ ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿರುವ ಸ್ಪೆರೊಕಾಸ್ಟ್ ಸಭಾಂಗಣದಲ್ಲಿ ತೆರಿಗೆದಾರರ ಸಭೆ ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣ ವೇದಿಕೆಯ ಕೆ.ವಿ. ವಸಂತಕುಮಾರ್ ತಿಳಿಸಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಆಸ್ತಿ ತೆರಿಗೆ ಅವೈಜ್ಞಾನಿಕ ಹೆಚ್ಚಳದ ಬಗ್ಗೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿತ್ತು. ಈ ದಾವೆಯನ್ನು ಸ್ವೀಕರಿಸಿರುವ ನ್ಯಾಯಾಲಯ ಸರಕಾರಕ್ಕೆ ಹಾಗೂ ಮಹಾನಗರ ಪಾಲಿಕೆಗೆ ನೋಟೀಸ್ ಜಾರಿ ಮಾಡಿದೆ. ದಾವೆದಾರರು ಈ ದಾವೆಯಲ್ಲಿ ಯಶಸ್ವಿಯಾದರೆ ಪಾವತಿಸಿರುವ ಹಣವನ್ನು ಶೇಕಡಾ ೧೨ರ ಬಡ್ಡಿಯೊಂದಿಗೆ ಪಾಲಿಕೆ ಹಿಂದಿರುಗಿಸಲು ಸೂಚಿಸಿದೆ. ಈ ದಾವೆದಾರರಂತೆ ಶಿವಮೊಗ್ಗದ ಎಲ್ಲಾ ತೆರಿಗೆದಾರರಿಗೂ ಅನ್ಯಾಯವಾಗಿದ್ದು ಕಾನೂನು ಹೋರಾಟ ಮಾಡಲು ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.