ಶಿವಮೊಗ್ಗ : ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆದಿಲ್ಲ. ತಾಲೂಕು ಪಂಚಾಯತ್ ಚುನಾವಣೆಗಳೂ ನಡೆದಿಲ್ಲ. ಯಾವಾಗ ನಡೀತಾವೆ ಅನ್ನೋದು ಗೊತ್ತಿಲ್ಲ. ಇದೀಗ ಆ ಪಟ್ಟಿಗೆ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಚುನಾವಣೆಯೂ ಸೇರಿಕೊಂಡಿದೆ. ಅಧಿಕಾರ ಅವಧಿ ಮುಗಿದು ತಿಂಗಳಾದ್ರೂ ಸರಕಾರ ಮಾತ್ರ ಗಪ್‌ಚುಪ್ ಆಗಿರೋದು ಚರ್ಚೆಗೆ ಗ್ರಾಸವಾಗಿದೆ.
ಮೇಯರ್, ಉಪ ಮೇಯರ್ ಚುನಾವಣೆಗೆ ಕುತ್ತು
ಸದ್ಯಕ್ಕೆ ನಡೆಯೋಲ್ಲ ಚುನಾವಣೆ
ಹೌದು, ಶಿವಮೊಗ್ಗ ಮಹಾನಗರ ಪಾಲಿಕೆಗೂ ಒಬಿಸಿ ಮೀಸಲು ಬಿಸಿ ತಟ್ಟಿದೆ. ಮಾರ್ಚ್ 10ಕ್ಕೆ ಮೇಯರ್ ಮತ್ತು ಉಪ ಮೇಯರ್ ಅವಧಿ ಮುಗಿದರೂ ಇನ್ನೂ ಯಾವಾಗ ಚುನಾವಣೆ ಅನ್ನೋ ಗೊಂದಲ ಮುಂದುವರಿದಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಿಂದುಳಿದ ವರ್ಗಗಳ ಮೀಸಲು ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪಾಲಿಕೆಗಳಿಗೆ ಮೀಸಲಾತಿ ಪ್ರಕಟವಾಗಿಲ್ಲ. ಸುಪ್ರೀಂ ಮಾನದಂಡದ ಅನ್ವಯ ಹೊಸ ಮೀಸಲು ನೀತಿ ನಿರ್ಧಾರಕ್ಕೆ ಸರಕಾರ ಆಯೋಗ ರಚನೆ ಮಾಡಬೇಕು. ಆಯೋಗದ ವರದಿ ಅನುಸಾರ ಮೀಸಲಾತಿ ಪ್ರಕಟಿಸಬೇಕು.
ರಾಜ್ಯದಲ್ಲಿ ಸರಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ನೂತನ ಮೇಯರ್ ಆಯ್ಕೆಯಾಗಿ ಶಿವಮೊಗ್ಗದಲ್ಲಿ ಸಭೆ ಕರೆಯಬೇಕಾಗಿತ್ತು. ಶಾಸಕ, ಎಂಪಿ ಎಲ್ಲರೂ ಇದ್ದಾರೆ. ಆದ್ರೆ, ಮಹಾನಗರ ಪಾಲಿಕೆ ಜನಪರ ಆಡಳಿತ ಮಾಡೋಕೆ ಪೂರಕ ಕೆಲಸ ಮಾಡ್ತಾ ಇಲ್ಲ. ಕೇವಲ ಕೋಮು ಭಾವನೆ ಕೆರಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ತಾ ಇದಾರೆ ಎಂದು ದೂರಿರುವ ಪಾಲಿಕೆ ಕಾಂಗ್ರೆಸ್ ಸದಸ್ಯರು, ಶಿವಮೊಗ್ಗದ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟು, ಧ್ವನಿ ಇಲ್ಲದ ವರ್ಗಕ್ಕೆ ಅವಕಾಶ ಮಾಡಿಕೊಡಿ ನೋಡೋಣ ಎಂದು ಬಿಜೆಪಿ ಸರಕಾರಕ್ಕೆ ಸವಾಲ್ ಹಾಕಿದ್ದಾರೆ.
ಮೀಸಲಾತಿ ಪ್ರಕಟವಾದ ನಂತರ ಎಲ್ಲಾ ಪ್ರಕ್ರಿಯೆ ಮುಗಿಯಬೇಕು ಅಂದ್ರೆ ಕನಿಷ್ಠ ನಾಲ್ಕೈದು ತಿಂಗಳು ಬೇಕೇ ಬೇಕು. ಹೊಸ ಮೀಸಲಾತಿ ಪ್ರಕಟವಾಗದಿರೋದ್ರಿಂದ ಹಾಲಿ ಮೇಯರ್ ಸುನೀತಾ ಅಣ್ಣಪ್ಪ ಮತ್ತು ಉಪ ಮೇಯರ್ ಶಂಕರ್ ಗನ್ನಿ ಅವಧಿಯೂ ಒಂದು ತಿಂಗಳ ವರೆಗೂ ವಿಸ್ತಾರಗೊಂಡಿದ್ದು, ಒಂದೂವರೆ ವರ್ಷದ ವರೆಗೂ ವಿಸ್ತಾರವಾಗುವ ಸಾಧ್ಯತೆಗಳು ಇವೆ.
ಒಟ್ಟಾರೆ ಸ್ಥಳೀಯ ಸಂಸ್ಥೆಗಳ ಅಧಿಕಾರಕ್ಕೆ ಗ್ರಹಣ ಹಿಡಿದಂತಾಗಿದ್ದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಕುತ್ತು ತಂದ ಬಳಿಕ, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸದೇ ಇರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.