ಮಹಾಮಳೆಗೆ ನಲುಗಿದ ಶಿವಮೊಗ್ಗ

ಶಿವಮೊಗ್ಗ : ೧೫ ಸುರಿದ ಮಹಾಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿಗಳಾಗಿದೆ. ಯಮಸ್ವರೂಪಿ ಮಳೆಗೆ ಹೊಸನಗರ ಹಾಗೂ ಸೊರಬದಲ್ಲಿ ೨ ಜೀವಗಳು ಬಲಿಯಾಗಿದೆ. ೮ ಜಾನುವಾರುಗಳು ಮೃತಪಟ್ಟಿವೆ. ಮಳೆಯಿಂದ ೩೯೦ ಮನೆಗಳಿಗೆ ಹಾನಿಯಾಗಿದ್ದು ಅದ್ರಲ್ಲಿ ೩೦ ಮನೆಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ. ೯೮ ಮನೆಗಳಿಗೆ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದ್ದು, ಇನ್ನುಳಿದ ೨೬೨ ಮನೆಗಳಿಗೆ ಭಾಗಷಃ ಹಾನಿಯಾಗಿದೆ. ೪೦೦ ಜನರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ೨೦೦೦ ಎಕರೆ ಕೃಷಿ ಪ್ರದೇಶವು ಮಳೆಯ ಅಬ್ಬರಕ್ಕೆ ಮುಳುಗಿ ಬೆಳೆ ಹಾನಿಯಾಗಿದೆ. ಅದೇ ರೀತಿ ಮಹಾಮಳೆಗೆ ೫೪೬ ವಿದ್ಯುತ್ ಕಂಬಗಳು, ೨೫೮ ಕಿಮಿ ರಸ್ತೆ, ೬ ಟ್ರಾಮ್ಸ್ ಫಾರ್ಮರ್, ೧೩ ಆರೋಗ್ಯ ಕೇಂದ್ರಗಳು, ೧೦೨ ಪ್ರಾಥಮಿಕ ಶಾಲೆ, ೧೩ ಅಂಗನವಾಡಿಗಳು, ೧೯ ಸೇತುವೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.

ಸೊರಬದ ದೇವತಿಕೊಪ್ಪದ ದೊಡ್ಡಕೆರೆ ಏರಿ ಕುಸಿಯುವ ಭೀತಿ

ಮಳೆ ಹೀಗೆ ಮುಂದುವರೆದರೆ ಸೊರಬ ತಾಲೂಕಿನ ದೇವತಿಕೊಪ್ಪದಲ್ಲಿ ದೊಡ್ಡ ಅನಾಹುತ ಸಂಭವಿಸುವ ಭೀತಿ ಇದೆ. ಕನಿಷ್ಠ ಮೂರರಿಂದ ನಾಲ್ಕು ಗ್ರಾಮಗಳು ಜಲಾವೃತವಾಗುವ ಸಂಭವವಿದೆ. ಇಲ್ಲಿನ ಸುಮಾರು ೧೫೦ ರಿಂದ ೧೬೦ ಎಕರೆ ವಿಸ್ತೀರ್ಣದ ದೊಡ್ಡಕೆರೆ ಏರಿ ರಸ್ತೆ ಭಾಗದಲ್ಲಿ ಕುಸಿದಿದೆ. ಈ ರೀತಿ ಕುಸಿದು ಮೂರು ದಿನವಾದ್ರು ಯಾವೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ಗ್ರಾಮಕ್ಕೆ ಗ್ರಾಮವೇ ಮುಳುಗುವ ಭೀತಿಯಲ್ಲಿದ್ರು ಈ ರೀತಿಯ ನಿರ್ಲಕ್ಷ್ಯ ವಹಿಸ್ತಾ ಇರೋದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೊಳೆಹೊನ್ನೂರಿನಲ್ಲಿ ಮನೆಗೆ ನುಗ್ಗಿದ ನೀರು

ಭದ್ರಾ ನದಿಗೆ ಆಣೆಕಟ್ಟಿನಿಂದ ನೀರನ್ನು ಬಿಡಲಾಗ್ತಾಯಿದ್ದು ನದಿಯ ಹರಿವು ಹೆಚ್ಚಾಗಿದೆ. ಪರಿಣಾಮವಾಗಿ ನದಿ ಪಾತ್ರದ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗ್ತಾಯಿದೆ. ಹೊಳೆಹೊನ್ನೂರಿನಲ್ಲಿಯೂ ನದಿಯ ನೀರು ಹೆಚ್ಚಾಗಿದ್ರಿಂದ ಏಡಿ ಕಾಲೊನಿಯಲ್ಲಿ ಮನೆಗೆ ನೀರು ನುಗ್ಗಿದೆ. ಈ ಹಿನ್ನೆಲೆ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಸಂತ್ರಸ್ಥರನ್ನು ಭೇಟಿ ನೀಡಿ ಸಾಂತ್ವಾನ ಹೇಳಿದ್ರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಯುವ ಅಧ್ಯಕ್ಷ ಬಿಂದು ಹರೀಶ್, ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭದ್ರಾವತಿಯ ಜನರಲ್ಲಿ ಆತಂಕ 

ಮಲೆನಾಡಿನಲ್ಲಿ ಮುಂದುವರಿದ ಮಳೆಯ ಆರ್ಭಟ ಯಥಾ ರೀತಿ ಮುಂದವರಿದಿದೆ. ಶಿವಮೊಗ್ಗ ನಗರದಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ರೂ ತುಂಗಾ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿತಾ ಇರೋದ್ರಿಂದ ಅಪಾರ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿ ಹರಿದು ಬರುತ್ತಿದೆ. ತುಂಗಾ ಜಲಾಶಯದಿಂದ ೫೩,೭೨೩ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ೫೫, ೬೩೨ ಕ್ಯೂಸೆಕ್ ಒಳಹರಿವು ಇದೆ. ಇನ್ನು ಭದ್ರಾ ಜಲಾಶಯಕ್ಕೆ ೫೩,೩೩೯ ಕ್ಯೂಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಇನ್ನು ಲಿಂಗನಮಕ್ಕಿ ಜಲಾಶಯಕ್ಕೆ ೫೦, ೪೮೧ ಕ್ಯೂಸೆಕ್ ಒಳಹರಿವು ಇದೆ. 

ಶಾಂತಿ ನಗರದಲ್ಲಿ ಮಳೆಯಿಂದ ಮನೆ ಹಾನಿ 

ಶಿವಮೊಗ್ಗ ನಗರದ ಶಾಂತಿ ನಗರದಲ್ಲಿ ಮಳೆಯಿಂದಾಗಿ ಮನೆ ಕುಸಿದಿದೆ. ೪ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಓರ್ವ ಮಹಿಳೆ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ. ಕಾಂತೇಶ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಮಹಿಳೆಯ ಆರೋಗ್ಯ ವಿಚಾರಿಸಿದರು. 

ಆಮ್ ಆದ್ಮಿ ಪಾರ್ಟಿಯಿಂದ ಬಾಗಿನ ಅರ್ಪಣೆ 

ಶಿವಮೊಗ್ಗದ ಜೀವನದಿಯಾಗಿರುವ ತುಂಗಾ ನದಿಯು ತುಂಬಿ ಹರಿಯುತ್ತಿದ್ದಾಳೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆ ಆಮ್ ಆದ್ಮಿ ಪಾರ್ಟಿ  ವತಿಯಿಂದ ತುಂಗಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಪಕ್ಷದ ಪ್ರಮುಖರಾದ ಮನೋಹರ್ ಗೌಡ, ಏಳುಮಲೈ ಕೇಬಲ್ ಬಾಬು  ಹಾಗೂ ನೇತ್ರಾವತಿ ವಹಿಸಿಕೊಂಡಿದ್ದರು. ನದಿ ತೀರದ ಕೋರ್ಪಳಯ್ಯನ ಛತ್ರದ ಬಳಿ ಮೈತುಂಬಿ ಹರಿಯುತ್ತಿರುವ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಲಾಗಿದ್ದು,ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.