ಶಾಹೀ ಗಾಮೆಂಟ್ಸ್ ವಿರುದ್ಧ ದುಮ್ಮಳ್ಳಿ ರೈತರ ಆಕ್ರೋಶ

ಶಿವಮೊಗ್ಗ : ಶಾಹೀ ಗಾಮೆಂಟ್ಸ್ ವಿರುದ್ಧ ದುಮ್ಮಳ್ಳಿ ರೈತರು ಗರಂ ಆಗಿದ್ದಾರೆ. ಗಾಮೆಂಟ್ಸ್‌ನ ಮೂವರು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದಾರೆ. ಬೆಳಗ್ಗಿನಿಂದ ಎಲ್ಲೂ ಹೋಗಲು ಬಿಡದೆ ಗ್ರಾಮದ ಸೇವಾಲಾಲ್ ಮರಿಯಮ್ಮ ದೇವಸ್ಥಾನದಲ್ಲಿ ಕೂರಿಸಿದ್ದಾರೆ. ಕಾರ್ಖಾನೆಯ ಹತ್ತಿರ ಇರುವ ಉಚ್ಚಂಗಿ ಕೆರೆಗೆ ಕಲೂಷಿತ ನೀರನ್ನ ಬಿಡಲಾಗಿದ್ದು ಇದರಿಂದ ದುಮ್ಮಳ್ಳಿಯಲ್ಲಿ ಹರಿಯುವ ಭದ್ರಾ ಚಾನೆಲ್‌ನಲ್ಲಿ ಕಲೂಷಿತ ನೀರು ಹರಿದುಬಂದಿದೆ. ಕಲೂಷಿತ ನೀರಿನಿಂದ ಜಾನುವಾರುಗಳು ಸತ್ತಿವೆ. ಅಲ್ಲದೆ ಚಾನೆಲ್‌ನಲ್ಲಿ ಇಳಿದರೆ ಮೈಕೈ ಕಡಿತ ಆರಂಭಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆದ್ದರಿಂದ ಶಾಹೀ ಗಾಮೆಂಟ್ಸ್‌ನ ಪಿಆರ್‌ಒ ಅಧಿಕಾರಿ ಸಿದ್ದಲಿಂಗಪ್ಪರನ್ನ ಸ್ಥಳಕ್ಕೆ ಕರೆಯಿಸಿದ್ದಾರೆ. ನಂತರ ಅವರನ್ನ ಮುತ್ತಿಗೆ ಹಾಕಿ ಘೇರಾವ್ ಮಾಡಿದ್ದು, ಬಳಿಕ ಫ್ಯಾಕ್ಟರಿಯ ಇಟಿಪಿ ಅಧಿಕಾರಿ ಸುನೀಲ್ ಜೋಷಿ, ಸಿವಿಲ್ ಇಂಜಿನಿಯರ್ ಶಿವುಕುಮಾರ್‌ರನ್ನು ಕರೆಯಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಇಟಿಪಿಯಿಂದ ಬಿಡುಗಡೆ ಮಾಡಿದ ನೀರು ಶೋಧಿಸದೆ ಕೆರೆಗೆ ನೀರು ಬಿಡಲಾಗುತ್ತಿದ್ದು ಗ್ರಾಮಗಳಿಗೆ ಚಾನೆಲ್ ಮೂಲಕ ಅದೇ ನೀರು ಹರಿದು ಬರುತ್ತಿದೆ.  ಇದನ್ನ ಶನಿವಾರದೊಳಗೆ ಸರಿ ಮಾಡಿಸಿಕೊಡುವುದಾಗಿ ಪಿಆರ್‌ಒ ಸಿದ್ದಲಿಂಗಪ್ಪ ತಿಳಿಸಿದ್ದು ನಂತರ ಗ್ರಾಮಸ್ಥರು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ