ಎರಡು ಡೋಸ್ ನಿಯಮದಿಂದ ಚಿತ್ರರಂಗಕ್ಕೆ ಆಘಾತ

ಓಮಿಕ್ರಾನ್ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಎರಡು ಡೋಸ್ ಪಡೆದವರಿಗೆ ಮಾತ್ರ ಚಿತ್ರಮಂದಿರದಲ್ಲಿ ಪ್ರವೇಶ ಕಲ್ಪಿಸಿದೆ. ಇದರಿಂದಾಗಿ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರವೇ ಹೇಳಿರುವಂತೆ ಶೇಕಡಾ 60ರಷ್ಟು ಜನರು ಎರಡನೇ ಡೋಸ್ ಪಡೆದಿಲ್ಲ. ಶೇಕಡಾ 20 ಕ್ಕೂ ಹೆಚ್ಚು ಜನರು ಮೊದಲನೇ ಲಸಿಕೆ ಪಡೆದಿಲ್ಲ. ಹಾಗಾಗಿ ಥಿಯೇಟರ್‌ಗೆ ಬರುವವರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಎರಡು ಡೋಸ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಅಷ್ಟೇನೂ ಉತ್ಸಾಹ ತೋರಿಸಿಲ್ಲ. ಏನೇ ಆದರೂ ಸಿನಿಮಾಗಳಿಗೆ ಆರ್ಥಿಕ ಹೊರೆ ಆಗಿದ್ದಂತೂ ಸತ್ಯ. ವಾಕ್ಸಿನ್ ತಗೆದುಕೊಳ್ಳಲು ಸರ್ಕಾರ ಇಂಥದ್ದೊಂದು ಕ್ರಮ ತಗೆದುಕೊಂಡಿದ್ದೇನೋ ಸರಿ. ಆದರೆ, ನಿಯಮ ಮಾತ್ರ ಸಿನಿಮಾ ಹಾಲ್, ಮಾಲ್‌ಗಳಿಗೆ ಮಾತ್ರ ಸೀಮಿತ ಏಕೆ ಎನ್ನುವ ಪ್ರಶ್ನೆ ಹಲವು ನಿರ್ಮಾಪಕರದ್ದು. ಪರಿಷತ್ ಚುನಾವಣೆ, ಹಲವು ಸಂಘ ಸಂಸ್ಥೆಗಳ ಚುನಾವಣೆ ನಡೆಯುತ್ತಿವೆ. ಜಾತ್ರೆಯಂತೆ ಜನ ಸೇರುತ್ತಿದ್ದಾರೆ. ಅಲ್ಲೇಕೆ ಈ ನಿಯಮ ಅನ್ವಯಿಸಲ್ಲ ಎನ್ನುವ ಪ್ರಶ್ನೆ ಕೂಡ ಮಾಡುತ್ತಿದೆ ಚಿತ್ರರಂಗ.