ದೇಣಿಗೆ ಸಂಗ್ರಹಕ್ಕೆ ಮುಂದಾದ ವೀರಶೈವ ಲಿಂಗಾಯತ ಸಮಾಜ 

ಶಿವಮೊಗ್ಗ : ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಹಾಗೂ ಬೆಳಗಾವಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಎರಡೂ ಕೂಡ ರಾಜಕೀಯವಾಗಿ ಭಾರಿ ಸದ್ದು ಮಾಡುತ್ತಿರುವ ಪ್ರಕರಣಗಳು. ಹರ್ಷ ಕೊಲೆಯಾದ ಬಳಿಕ ಇಡೀ ಹಿಂದೂ ಸಮಾಜ ಆತನ ಕುಟುಂಬದ ಜೊತೆ ನಿಂತಿತ್ತು. ಕೋಟಿ ಕೋಟಿ ಆರ್ಥಿಕ ನೆರವು ಹರಿದು ಬಂದಿತ್ತು.

ಆದೇ ರೀತಿ ಸಂತೋಷ್ ಪಾಟೀಲ್ ಕುಟುಂಬದ ಬೆಂಬಲಕ್ಕೆ ವೀರಶೈವ ಲಿಂಗಾಯತ ಸಮಾಜ ನಿಂತಿದ್ದು, ಸಂತೋಷ್ ಪಾಟೀಲ್ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಸಮಾಜದ ಮುಖಂಡರು ಸಭೆ ನಡೆಸಿ, ಸಂತೋಷ್ ಪಾಟೀಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ದೇಣಿಗೆ ಸಂಗ್ರಹಿಸಲಾಗುತ್ತದೆ. ಬಳಿಕ ಏಪ್ರಿಲ್ 22 ರಂದು ಸಂಗ್ರಹವಾದ ಹಣವನ್ನು ಸಂತೋಷ್ ಪಾಟೀಲ್ ಕುಟುಂಬಕ್ಕೆ ಹಸ್ತಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.