ಶಿವಮೊಗ್ಗ : ಸಾಗರ ರಸ್ತೆಯ ಶರಾವತಿ ಡೆಂಟಲ್ ಕಾಲೇಜು ಬಳಿ ಭೀಕರ ಅಪಘಾತವಾಗಿದ್ದು ೭ ಎಮ್ಮೆಗಳು ಸ್ಥಳದಲ್ಲಿ ಮೃತಪಟ್ಟಿವೆ. ಭಾನುವಾರ ರಾತ್ರಿ ಆಲ್ಕೋಳ ಕಡೆಯಿಂದ ಬ್ರೀಜಾ ಕಾರು ರಭಸವಾಗಿ ಬಂದಿದೆ. ಇದೇ ವೇಳೆ ಎಮ್ಮೆಗಳು ರಸ್ತೆ ದಾಟುತ್ತಿದ್ದವು. ಕಾರಿನ ವೇಗ ಅತಿಯಾಗಿದ್ದರಿಂದ ಚಾಲಕನಿಗೆ ಕಾರು ನಿಯಂತ್ರಣ ಸಿಗದೆ ಎಮ್ಮೆಗಳ ಮೇಲೆ ನುಗ್ಗಿದೆ. ಕಾರು ಗುದ್ದಿದ್ದ ಹೊಡೆತಕ್ಕೆ ೭ ಎಮ್ಮೆಗಳು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಗಾಡಿಕೊಪ್ಪ ನಿವಾಸಿಯಾಗಿರುವ ಎಮ್ಮೆಗಳ ಮಾಲೀಕ ರಾತ್ರಿಯಾದರು ಎಮ್ಮೆಗಳು ಬಾರದೇ ಇರುವುದರಿಂದ ಅವುಗಳನ್ನು ಹುಡುಕಿ ವಾಪಾಸ್ ಹೊಡೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಇನ್ನು ಘಟನಾ ಸ್ಥಳಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು, ಎಮ್ಮೆಯ ಮಾಲೀಕನಿಗೆ ಸಾಂತ್ವಾನ ಹೇಳಿದ್ದಾರೆ. ಘಟನೆ ಸಂಬಂಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.