ಶಿವಮೊಗ್ಗ : ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನ ರೈತರ ನಿರಂತರ ಹೋರಾಟದಿಂದಾಗಿ ವಾಪಸ್ ಪಡೆಯಲಾಗಿದೆ. ಆದ್ರೆ ಈ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನ ವಾಪಸ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಈ ಕಾಯ್ದೆಗಳನ್ನ ವಾಪಸ್ ಪಡೆಯುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡದ ಅವರು, ಕಾಯ್ದೆಗಳನ್ನ ವಾಪಸ್ ಪಡೆಯುವಂತೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರನ್ನ ಭೇಟಿ ಮಾಡಲಾಗಿತ್ತು. ಆಗ ಮುಖ್ಯಮಂತ್ರಿಗಳು ಬೆಂಗಳೂರು ವಿಧಾನಸಭಾ ಅಧಿವೇಶನದಲ್ಲಿ ವಾಪಸ್ ಪಡೆಯುವುದಾಗಿ ಹೇಳಿದ್ದರಾದರೂ ಈವರೆಗೆ ವಾಪಸ್ ಪಡೆದಿಲ್ಲ. ಆದ್ದರಿಂದ ಈ ಕಾಯ್ದೆಗಳನ್ನ ವಾಪಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೇರಿಸುವ ಸಲುವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.