ಶಿವಮೊಗ್ಗ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ಸಿಟಿ ರೌಂಡ್ಸ್ ಹಾಕಿದ್ದಾರೆ. ಮಳೆಯಿಂದಾಗಿ ಜಲಾವೃತವಾಗಿರುವ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜನರು ಸಂಸದರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಳಗ್ಗೆಯಿಂದಲೇ ಜಲಾವೃತ ಪ್ರದೇಶಗಳಿಗೆ ಭೇಟಿ ಆರಂಭಿಸಿದ ಬಿ.ವೈ.ರಾಘವೇಂದ್ರ, ವಿನೋಬನಗರ 60 ಫೀಟ್ ರಸ್ತೆ, ವೆಂಕಟೇಶ್ ನಗರದ ಚಾನೆಲ್ ಏರಿಯಾದ ಮೇಲಿನ ಮನೆಗಳಿಗೆ ಭೇಟಿ ನೀಡಿದರು. ಈ ವೇಳೆ ಲಕ್ಷ್ಮೀ ಟಾಕೀಸ್ ಹಿಂಭಾಗದ ಚಾನೆಲ್ ಬ್ರಿಡ್ಜ್ ಮೇಲೆ ನಡೆದಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಸರಿಯಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾನುವಾರ ಸಂಸದರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.