ದೇವರ ಹುಂಡಿ ಕದ್ದ ಕಳ್ಳರು  

ಪುರದಾಳು : ಕಳ್ಳರಿಗೆ ದೇವರ ದುಡ್ಡಾದರೇನು? ದೆವ್ವದ ದುಡ್ಡಾದರೇನು? ಅವರಿಗೆ ದುಡ್ಡು ಬೇಕಷ್ಟೆ. ಹೌದು ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಾಲಯದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ದೇವಾಲಯದ ಮುಂಬಾಗಿಲನ್ನು ಒಡೆದು ಒಳನುಗ್ಗಿರುವ ಕಳ್ಳರು ದೇವರ ಹುಂಡಿಯನ್ನೇ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಮುಂಜಾನೆ ದೇವಸ್ಥಾನದಲ್ಲಿ ಅರ್ಚಕರು ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅರ್ಚಕರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ತಿಳಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದ್ದು,ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸ್ಥಳಕ್ಕೆ  ಬೆರಳಚ್ಚು ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.