ಗ್ರಾಮದಲ್ಲಿ ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಶಿವಮೊಗ್ಗ: ತಮ್ಮ ಗ್ರಾಮದಲ್ಲಿ ತೆರೆದಿರುವ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಶಿಕಾರಿಪುರ ತಾಲೂಕಿನ ಮುಡಬ ಸಿದ್ದಾಪುರ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.

ಗ್ರಾಮದಲ್ಲಿ ಈಗಾಗಲೇ ಮದ್ಯದ ಅಂಗಡಿಯನ್ನು ತೆರೆಯಲಾಗಿದೆ. ಆದರೆ ಗ್ರಾಮಸ್ಥರು, ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯವರು ಸಭೆ ನಡೆಸಿ, ಮದ್ಯದ ಅಂಗಡಿ ಬೇಡ ಎಂದು ತೀರ್ಮಾನಿಸಿದ್ದೇವೆ. ಇದನ್ನು ಅಂಗಡಿ ತೆರೆದ ಮೇಲೆ ಏಕಾಏಕಿ ವಿರೋಧಿಸುತ್ತಿಲ್ಲ. ೨ ವರ್ಷಗಳ ಹಿಂದಿನಿAದಲೂ ಈ ಬಗ್ಗೆ ಜಿಲ್ಲಾಧಿಕಾರಿಗಳು, ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಮದ್ಯದ ಅಂಗಡಿ ಸಮೀಪದಲ್ಲೆ ಶಾಲೆ ಇದೆ. ಪಕ್ಕದ ಊರುಗಳ ಮಕ್ಕಳೂ ಇಲ್ಲಿಗೆ ಬರುತ್ತಾರೆ. ಇದರಿಂದ ವಾತಾವರಣ ಹಾಳಾಗುತ್ತದೆ. ಅಲ್ಲದೆ ಊರಿನ ಯುವಕರು ಹಾಗೂ ವಯಸ್ಕರರು ಕುಡಿದು ಹಾಳಾಗುತ್ತಾರೆ.

ಹಾಗಾಗಿ ನಾವು ಈ ಹಿಂದೆಯೂ ಪ್ರತಿಭಟನೆ ಮಾಡಿ ಮದ್ಯದಂಗಡಿ ತೆರೆಯುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದೇವೆ. ಪರಿಶೀಲನೆಗೆ ಬಂದ ಅಬಕಾರಿ ಇನ್ಸ್ಪೆಕ್ಟರ್ ಅವರಿಗೂ ಮನವಿ ಮಾಡಿದ್ದೇವೆ. ಅಲ್ಲದೆ ತಹಶೀಲ್ದಾರ್ ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಆದರೂ ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಮದ್ಯದಂಗಡಿಗೆ ಅವಕಾಶ ಕೊಟ್ಟಿರುವ ಅನುಮತಿ ಆದೇಶವನ್ನು ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಹೋರಾಟ ನಡೆಸಿದ್ರು.

ಮಧ್ಯಾಹ್ನ ೨ ಗಂಟೆ ಅಷ್ಟೊತ್ತಿಗೆ ಜಿಲ್ಲಾಧಿಕಾರಿಗಳು ಪ್ರಮುಖ ಹೋರಾಟಗಾರರನ್ನು ಕರೆಸಿ ಮಾತುಕತೆ ನಡೆಸಿದ್ರು. ಬಳಿಕ ಅಂಗಡಿ ತೆರವು ಮಾಡುವ ಭರವಸೆ ಕೊಟ್ಟ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಗಿದೆ.