ವಿಧಾನ ಪರಿಷತ್ ಚುನಾವಣೆಯಲ್ಲಿ ಇತಿಹಾಸ ಬದಲಿಸುವ ವಿಶ್ವಾಸವಿದೆ

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಎರಡನೇ ಅವಧಿಗೆ ಗೆದ್ದ ಇತಿಹಾಸ ಇಲ್ಲ. ಆದ್ರೆ ನಾನು ಆ ಇತಿಹಾಸವನ್ನು ಬದಲಿಸಿ ಎರಡನೇ ಅವಧಿಗೆ ಗೆಲ್ಲುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಹೇಳಿದ್ರು. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ನಾನು ಬಹಳಷ್ಟು ಅನುದಾನವನ್ನು ಸರ್ಕಾರದಿಂದ ತರಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಈಗ ಎರಡನೇ ಬಾರಿ ಸ್ಪರ್ಧಿಸುವ ಅವಕಾಶ ಪಕ್ಷ ನೀಡಿದ್ದು, ಪ್ರಚಾರದ ಸಮಯದಲ್ಲಿ ಮತದಾರರು ನನಗೆ ಭರವಸೆ ನೀಡಿದ್ದಾರೆ. ಈ ಬಾರಿಯೂ ಸಹ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುತ್ತೇನೆ ಎಂಬ ವಿಶ್ವಾಸವಿದೆ ಎಂದರು. ಮಧು ಬಂಗಾರಪ್ಪ ಅವರು ತಮ್ಮ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ಗೆ ಬರುವಾಗ ಸಾಕಷ್ಟು ಕಾರ್ಯಕರ್ತರು ಹಾಗೂ ಮತದಾರರನ್ನ ಕರೆತಂದಿದ್ದಾರೆ. ಹಾಗೆಯೇ ಭದ್ರಾವತಿಯ ಪ್ರಚಾರದಲ್ಲಿಯೂ ಸಹ ಜೆಡಿಎಸ್‌ನ ಮತದಾರರು ನನಗೆ ಬೆಂಬಲ ಸೂಚಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರು ಜೆಡಿಎಸ್‌ನ ಸಾಕಷ್ಟು ಮತದಾರರನ್ನು ನಮ್ಮ ಬೆಂಬಲಕ್ಕೆ ಕರೆತಂದಿದ್ದಾರೆ ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.