ಶಿವಮೊಗ್ಗ : ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನ ಕಾರ್ಯಕ್ರಮ ಮಾಚೇನಹಳ್ಳಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶ ನೀಡುವ ಹಾಗೂ ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ತಮಗೆ ಹುದ್ದೆ ದೊರೆತಿರುವುದು ಅದೃಷ್ಟ. ಇಂತಹ ಸಾರ್ವಜನಿಕ ಸೇವೆಯ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಅಂದ್ಹಾಗೆ ಒಟ್ಟು ೨೨೪ ಪ್ರಶಿಕ್ಷಣಾರ್ಥಿಗಳು ನಿರ್ಗಮಿಸಿದ್ದು, ಹೆಚ್ಚಿನವರು ಉನ್ನತ ವಿದ್ಯಾಭ್ಯಾಸ ಮಾಡಿರುವುದು ವಿಶೇಷವಾಗಿದೆ. ಇದರಲ್ಲಿ ೧೪ ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ ಪದವೀಧರರು, ೧೪ ಜನರು ಇಂಜಿನಿಯರ್ ಪದವೀಧರರು, ೧೨೦ ಪ್ರಶಿಕ್ಷಣಾರ್ಥಿಗಳು ಪದವೀಧರರು, ೬೨ ಪದವಿಪೂರ್ವ, ೫ ಡಿಪ್ಲೊಮಾ, ೧ ಐಟಿಐ ಹಾಗೂ ೮ ಪ್ರಶಿಕ್ಷಣಾರ್ಥಿಗಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ವಿ.ರಾಮಕೃಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ಮತ್ತಿತರ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.