ಹೆಚ್.ಆರ್. ಕೇಶವಮೂರ್ತಿಗೆ ಒಲಿದ ಪದ್ಮಶ್ರೀ ಪುರಸ್ಕಾರ 

ಶಿವಮೊಗ್ಗ : ಖ್ಯಾತ ಗಮಕ ಕಲಾವಿದ ಹೆಚ್.ಆರ್.ಕೇಶವಮೂರ್ತಿ ಈ ಬಾರಿಯ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇವರು ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದವರು. ಇವರು ಬಾಲ್ಯದಲ್ಲಿಯೇ ಗಮಕ ಕಲೆಯನ್ನು ಕಲಿತವರು. ಇವರ ತಂದೆ ಹಾಗೂ ತಾಯಿ ಹಾಡುತ್ತಿದ್ದ ಪುರಾಣಗಳಿಂದ ಪ್ರೇರೇಪಿತರಾಗಿ ಗಮಕದ ಕಡೆ ಆಸಕ್ತಿಯನ್ನು ಹೊಂದಿದ್ದರು.

ನಂತರ ತಮ್ಮ 16ನೇ ವಯಸ್ಸಿನಲ್ಲಿ ಹೊಸಹಳ್ಳಿ ಗ್ರಾಮದ ವೆಂಕಟೇಶಯ್ಯನವರ ಬಳಿ ಗಮಕ ವಾಚನವನ್ನು ಕಲಿಯಲು ಪ್ರಾರಂಭಿಸಿದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ರಾಗವಾಗಿ ಹಾಡುವುದನ್ನು ಕಲಿತುಕೊಂಡಿದ್ದರು. ಇವರು 100ಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವುದರಿಂದ ಶತರಾಗಿ ಎಂಬ ಬಿರುದನ್ನು ಪಡೆದುಕೊಂಡರು ರಾಜ್ಯವಲ್ಲದೇ ದೇಶ-ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಗಮಕದಲ್ಲಿನ ಸಾಧನೆಗೆ ಕುಮಾರವ್ಯಾಸ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಇವರ ಅನೇಕ ಶಿಷ್ಯರು ಇಂದು ಗಮಕದಲ್ಲಿ ಸಾಧನೆ ಮಾಡುತ್ತಿದ್ದಾರೆ.