ಶಿವಮೊಗ್ಗ : ಜವಳಿ ಮೇಲೆ ಜಿಎಸ್‌ಟಿ ತೆರಿಗೆ ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ ಅಂಚೆ ಕಾರ್ಡು ಚಳವಳಿ ಹಮ್ಮಿಕೊಳ್ಳಲಾಗಿದೆ. ಕೇಂದ್ರದ ನಿರ್ಧಾರದಿಂದ ಸಾರ್ವಜನಿಕರಿಗೆ ಕೂಡ ಬೆಲೆ ಏರಿಕೆಯ ಬಿಸಿ ತಾಗುವುದರಿಂದ ಸಾರ್ವಜನಿಕರು ನಮ್ಮ ಚಳವಳಿಗೆ ಬೆಂಬಲ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಹಾಗೂ ಶಿವಮೊಗ್ಗ ಜವಳಿ ವರ್ತಕರ ಸಂಘ ಮನವಿ ಮಾಡಿಕೊಂಡಿದೆ.
ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್. ವಾಸುದೇವ್, ಕೇಂದ್ರ ಸರ್ಕಾರವು ಜನವರಿಯಿಂದ ಬಟ್ಟೆಯ ಮೇಲಿನ ಜಿಎಸ್‌ಟಿಯನ್ನ ಶೇಕಡಾ 5ರಿಂದ ಶೇಕಡಾ 12ಕ್ಕೆ ಏರಿಸಲು ತೀರ್ಮಾನಿಸಿದೆ. ಹೀಗಾಗಿ ನಾವು ಈಗಾಗಲೇ ಅಂಚೆ ಕಾರ್ಡು ಚಳವಳಿ ಕೈಗೊಂಡಿದ್ದು, ಸಾವಿರ ಕಾರ್ಡುಗಳನ್ನು ಪೋಸ್ಟ್ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇವೆ. ಹೀಗೆಯೇ ಮುಂದಿನ ದಿನಗಳಲ್ಲಿ 5 ಸಾವಿರ ಪೋಸ್ಟ್ ಮಾಡುವ ಉದ್ದೇಶ ಹಾಗೂ ಪ್ರತೀ ಜವಳಿ ಅಂಗಡಿಯ ಮುಂದೆ ಪ್ರತಭಟನೆಯ ಸಂಕೇತವಾಗಿ ಪ್ಲೇ ಕಾರ್ಡ್ ಹಾಕುವ ಗುರಿಯಿದೆ. ಹೀಗಾಗಿ ಸಾರ್ವಜನಿಕರು ಕೂಡ ನಮಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.