ಟೋಕಿಯೊ : ಇಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸ್ನೇಹವನ್ನು ಗಟ್ಟಿಗಳಿಸುವ ಸಂಗತಿಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಭಾರತ-ಅಮೆರಿಕ ಸ್ನೇಹ ಸಂಬಂಧ ಉತ್ತಮ ಶಕ್ತಿಯಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ಮುಂದುವರೆದು ಮಾತನಾಡಿದ ನರೇಂದ್ರ ಮೋದಿ, ನಮ್ಮ ಜನರ ನಡುವಿನ ಸಂಬಂಧಗಳು ಮತ್ತು ಬಲವಾದ ಆರ್ಥಿಕ ಸಹಕಾರವು ನಮ್ಮ ಪಾಲುದಾರಿಕೆಯನ್ನು ಅನನ್ಯವಾಗಿಸುತ್ತದೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಸ್ಥಿರವಾಗಿ ಏರಿಕೆಯಾಗುತ್ತಿವೆ. ಆದರೆ, ಅವುಗಳು ಇನ್ನೂ ನಮ್ಮ ಸಾಮರ್ಥ್ಯಕ್ಕಿಂತ ಕೆಳಗಿವೆ ಎನ್ನುವ ಮೂಲಕ ಪ್ರಧಾನಿ ಮೋದಿ ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಹಾಗೂ ಹೂಡಿಕೆ ಹೆಚ್ಚಿಸುವ ಆಶಯ ವ್ಯಕ್ತಪಡಿಸಿದರು.