ಶಿವಮೊಗ್ಗ : ಜಿಲ್ಲಾ ನೂತನ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವಾದ ಅಂಗವಾಗಿ 14 ಅಮೃತ್ ಯೋಜನೆಗಳನ್ನು ಹೊಸದಾಗಿ ಘೋಷಿಸಲಾಗಿದ್ದು, ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕ್ರೀಡೆ, ಕೈಗಾರಿಕೆ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಂಪರ್ಕ ರಸ್ತೆಗಳು, ಸೇತುವೆಗಳು, ನೂತನ ರೈಲು ಮಾರ್ಗ, ವಿಮಾನ ನಿಲ್ದಾಣ ಕಾಮಗಾರಿಗಳನ್ನು ನಿಗಧಿತ ಅವಧಿಯ ಒಳಗಾಗಿ ಪೂರ್ಣಗೊಳಿಸುವ ಪಣ ತೊಡಲಾಗಿದೆ.
ಜಿಲ್ಲೆಯ 6 ತಾಲೂಕುಗಳ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕುಸ್ತಿ ಮತ್ತು ವಾಲಿಬಾಲ್ ಕ್ರೀಡಾಪಟುಗಳಿಗಾಗಿ ಹಾಸ್ಟೆಲ್‌ಗಳನ್ನು ಈ ವರ್ಷದಿಂದ ಶಿವಮೊಗ್ಗ ನಗರದಲ್ಲಿ ಪ್ರಾರಂಭಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸ್ವಚ್ಛ ಭಾರತ ಪರಿಕಲ್ಪನೆಯಡಿ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲಾಗುತ್ತಿದೆ. ಶಿವಮೊಗ್ಗ ನಗರಕ್ಕೆ 104 ಕೋಟಿ ರೂಪಾಯಿ ವೆಚ್ಚದಲ್ಲಿ ದಿನದ ೨೪ ಗಂಟೆಯೂ ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆ ಹಾಗೂ ಮಹಾನಗರ ಪಾಲಿಕೆ ಹೊರವಲಯದಲ್ಲಿರುವ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ 96.50ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಈಗ ಚಾಲನೆ ನೀಡಲಾಗಿದ್ದು, ಈ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.