ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ 

ಶಿವಮೊಗ್ಗ: ಕಾರ್ಡು ಚಿಕ್ಕದು, ಸೇವೆ ದೊಡ್ಡದು ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾದ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆ ಕಳೆದ ಹಲವು ವರ್ಷಗಳಿಂದ ಯಶಸ್ವಿಯತ್ತ ಸಾಗುತ್ತಿದ್ದು, ಪ್ರಸಕ್ತ ವರ್ಷದ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬುದೇ ನಮ್ಮ ತತ್ವವಾಗಿದೆ. ಸಮುದಾಯದ ಎಲ್ಲ ಬಡವರಿಗೂ ಸುಲಭ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಜಾರಿಗೆ ತರಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲದೇ ಇಡೀ ರಾಜ್ಯ ಹಾಗೂ ನೆರೆಯ ರಾಜ್ಯಗಳಿಗೂ ಕೂಡ ಈ ಕಾರ್ಡ್ ತಲುಪಿ ಆರೋಗ್ಯ ಸೇವೆಯಲ್ಲಿ ಮಣಿಪಾಲ ಆಸ್ಪತ್ರೆ ಮಹತ್ತರ ಪಾತ್ರ ವಹಿಸಿದೆ ಎಂದರು.

ಈ ಯೋಜನೆಯ ಅನ್ವಯ ಒಂದು ವರ್ಷಕ್ಕೆ ಒಬ್ಬರಿಗೆ ೩೦೦ ರೂ. ಆಗಿದೆ. ಆದರೆ ಕೌಟುಂಬಿಕ ಕಾರ್ಡ್ ಪಡೆಯಲು ಅವರ ಸಂಗಾತಿ ಮತ್ತು ೨೫ ವರ್ಷದ ಒಳಗಿನ ಮಕ್ಕಳಿಗೆ ೬೦೦ ರೂ. ನಿಗದಿ ಮಾಡಿದೆ. ಕುಟುಂಬ ಪ್ಲಸ್ ಯೋಜನೆಯಲ್ಲಿ ಕಾರ್ಡುದಾರ ಅವರ ಸಂಗಾತಿ, ೨೫ ವರ್ಷದೊಳಗಿನ ಮಕ್ಕಳು ಮತ್ತು ಅವರ ನಾಲ್ವರು ಪೋಷಕರು (ತಂದೆ, ತಾಯಿ, ಅತ್ತೆ ಮಾವ) ಸೇರಿ ರೂ. ೭೫೦ ನಿಗಧಿ ಪಡಿಸಲಾಗಿದ್ದು, ಇದು ಹೆಚ್ಚುವರಿ ಲಾಭವಾಗಿದೆ. ಎರಡು ವರ್ಷದ ಯೋಜನೆಗೆ ಒಬ್ಬರಿಗೆ ೫೦೦ ರೂ., ಕುಟುಂಬ ಯೋಜನೆಗೆ ೮೦೦ ರೂ., ಕೌಟುಂಬಿಕ ಪ್ಲಸ್ ಯೋಜನೆಯಲ್ಲಿ ೯೫೦ ರೂ.ಗಳನ್ನು ನಿಗಧಿ ಪಡಿಸಲಾಗಿದೆ ಎಂದರು.

ಕಾರ್ಡ್‌ನ ಪ್ರಯೋಜನಗಳೇನೆಂದರೆ, ವೈದ್ಯರ ಸಮಾಲೋಚನೆಯಲ್ಲಿ ಶೇ. ೫೦, ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.೩೦, ಒಳರೋಗಿಗಳಾಗಿ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದರೆ ಶೇ. ೨೫ರಷ್ಟು, ಕೋವಿಡ್ ರೋಗಿಗಳಿಗೆ ಜನರಲ್ ವಾರ್ಡ್‌ನಲ್ಲಿ ಸರ್ಕಾರದ ಅನುಮೋದಿತ ಪ್ಯಾಕೇಜ್ ಮೇಲೆ ಶೇ.೧೦ರಷ್ಟು, ಸಿ.ಟಿ., ಎಂಆರ್‌ಐ, ಆಲ್ಟ್ರಾ ಸೌಂಡ್ ಪರೀಕ್ಷೆಗೆ ಶೇ.೨೦ರಷ್ಟು, ಮಧುಮೇಹ ರೋಗಿಗಳ ತಪಾಸಣೆಗೆ ಶೇ. ೨೦ರಷ್ಟು, ಔಷಧಾಲಯಗಳಲ್ಲಿ ಶೇ.೧೨ರಷ್ಟು ರಿಯಾಯಿತಿ ಸಿಗುತ್ತದೆ ಎಂದರು.
ಈ ಕಾರ್ಡ್ ಹೊಂದಿರುವವರು ಕರಾವಳಿ ಕರ್ನಾಟಕ ಮತ್ತು ಗೋವಾದ ಮಣಿಪಾಲ ಆಸ್ಪತ್ರೆ, ಮಣಿಪಾಲದ ಕಸ್ತೂರಬಾ ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆ, ಕಾರ್ಕಳದ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರದ ಮತ್ತು ಮಂಗಳೂರಿನ ದುರ್ಗಾ ಸಂಜೀವಿನಿ ಆಸ್ಪತ್ರೆ, ಕಟೀಲಿನ ಮಣಿಪಾಲ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಸೇವೆಯನ್ನು ಪಡೆಯಬಹುದು ಎಂದರು.

ಮಣಿಪಾಲ ಕಾರ್ಡ್ ಪಡೆಯಲು ಶಿವಮೊಗ್ಗದಲ್ಲಿ ಆ.ನಾ. ವಿಜಯೇಂದ್ರರಾವ್ - ೯೪೪೮೭೯೦೧೨೭, ಶ್ರೀನಿವಾಸ ಭಾಗವತ್ - ೮೧೦೫೨೮೨೧೪೬ ಅವರನ್ನು ಸಂಪರ್ಕಿಸಬಹುದು ಎಂದರು.

ಮಣಿಪಾಲ ಆಸ್ಪತ್ರೆಯ ಪ್ರತಿನಿಧಿ ಶ್ರೀನಿವಾಸ್ ಭಾಗವತ್ ಮಾತನಾಡಿ, ಅಪಘಾತದಂತಹ ಸಂದರ್ಭದಲ್ಲಿ ನೇರವಾಗಿ ಮಣಿಪಾಲ ಕಾರ್ಡ್ ಅನ್ನು ಮಾಡಬಹುದು. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಪ್ರಾರಂಭವಾದ ಈ ಕಾರ್ಡ್ ಅನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿನಿಧಿ ಆ.ನಾ. ವಿಜಯೇಂದ್ರರಾವ್, ನವೀನ್ ಇದ್ದರು.