ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆಯಲ್ಲಿರುವ ಶ್ರೀ ಚೌಡೇಶ್ವರಿ ಭೂತರಾಯ ಹಾಗೂ ಸೈಯದ್ ಸಾದತ್ ದರ್ಗಾವಿರುವ ಧಾರ್ಮಿಕ ಕ್ಷೇತ್ರದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.
ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರದಲ್ಲಿ ತಹಶೀಲ್ದಾರ್ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ತಹಶೀಲ್ದಾರ್ ಆದೇಶ ಉಲ್ಲಂಘನೆ ಮಾಡುತ್ತಿರುವುದಕ್ಕೆ ಸ್ಥಳೀಯರಿಂದ ವ್ಯಾಪಕ ವಿರೋಧ ಕೇಳಿ ಬಂದಿದೆ. ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರದಲ್ಲಿ ಕುರಿ-ಕೋಳಿ ಬಲಿ ಕೊಡುವುದನ್ನು ತಹಶೀಲ್ದಾರ್ ನಿಷೇಧ ಮಾಡಿದ್ರು. ಇದೀಗ ತಹಶೀಲ್ದಾರ್ ಅವರ ಆದೇಶ ಉಲ್ಲಂಘನೆ ಮಾಡಿ, ಮತ್ತೆ ಭಕ್ತರು ಪ್ರಾಣಿ ಬಲಿ ನೀಡುತ್ತಿದ್ದಾರೆ. ಪ್ರಾಣಿಬಲಿ ನಿಷೇಧ ಮಾಡಿದ್ದರೂ, ಆದೇಶ ಉಲ್ಲಂಘಿಸುವುದಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಗಿ ಕ್ರಮ ಕೈಗೊಳ್ಳುವಂತೆ ಹಣೆಗೆರೆಕಟ್ಟೆ ಹಾಗೂ ಕೆರೆಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹರಕೆ ತೀರಿಸುವ ಭಕ್ತರಿಂದ ಸ್ಥಳೀಯ ಪರಿಸರ ಹಾಳಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಬಲಿ ನೀಡುವವರು ಹಣೆಗೆರೆಕಟ್ಟೆ, ಕೆರೆಹಳ್ಳಿಯ ಅರಣ್ಯದೊಳಗೆ ಅಡುಗೆ ಮಾಡುತ್ತಿದ್ದಾರೆ. ಹಣಗೆರೆಕಟ್ಟೆ ಕ್ಷೇತ್ರದ ೨ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯದಲ್ಲಿ ಈ ರೀತಿಯ ಕೆಲಸ ಮಾಡಲಾಗ್ತಿದೆ. ಹಾಗಾಗಿ ಹರಕೆ ತೀರಿಸಿ, ಅರಣ್ಯದೊಳಗೆ ಅಡುಗೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲು ಸ್ಥಳೀಯರು ಅಗ್ರಹಿಸಿದ್ದಾರೆ. ಪ್ರಾಣಿಬಲಿ ನೀಡಲು ಬರುವ ವಾಹನ ತಡೆದು, ಗ್ರಾಮಸ್ಥರು ತಾವೇ ವಾಪಸ್ ಕಳುಹಿಸುತ್ತಿದ್ದಾರೆ. ಕೋಳಿ, ಕುರಿ, ಅಕ್ಕಿ, ಪಾತ್ರೆ ತೆಗೆದುಕೊಂಡು ಬರುವುದಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ತಹಶೀಲ್ದಾರ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹಣಗೆರೆಕಟ್ಟೆ - ಕೆರೆಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.