ಉದ್ಯಮ ಕ್ಷೇತ್ರದ ಹೊಸ ಪ್ರವೃತ್ತಿಗಳು 

ಶಂಕರಘಟ್ಟ : ಕೋವಿಡ್-19 ನಂತರದ ಕಾಲಘಟ್ಟದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಪೊರೆಟ್ ಸಂಸ್ಥೆಗಳು ಮತ್ತೆ ಯಶಸ್ಸಿನ ಹಳಿಗೆ ಮರಳಬೇಕಿದೆ. ಇದಕ್ಕಾಗಿ ಹೊಸ ಆಲೋಚನೆಗಳನ್ನು, ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುವ ಆತಂಕವಿದೆ ಎಂದು ಭಾರತೀಯ ಸಮಾಜ ವಿಜ್ಞಾನಗಳ ಸಂಶೋಧನಾ ಮಂಡಳಿ ಹಿರಿಯ ಸಂಶೋಧನಾ ತಜ್ಞ ಡಾ. ಜಿ. ಕೊಟ್ರೇಶ್ವರ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ಉದ್ಯಮ ಕ್ಷೇತ್ರದ ಹೊಸ ಪ್ರವೃತ್ತಿಗಳು ಎಂಬ ವಿಷಯದ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ವಿವಿಧ ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳಿಂದ ಸೃಷ್ಟಿಯಾಗಿರುವ ಕ್ಲಿಷ್ಠಕರ ವಾತಾವರಣದಲ್ಲಿ ಉದ್ಯಮ ಸಂಸ್ಥೆಗಳು ಉಳಿಯುವುದೇ ಕಷ್ಟಕರವಾಗಿದೆ. ಇದು ಒಂದೆಡೆ ಸವಾಲೆನಿಸಿದರೆ ಮತ್ತೊಂದು ರೀತಿಯಲ್ಲಿ ಅವಕಾಶಗಳ ಹೊಸ ಬಾಗಿಲು ತೆರೆದಿದೆ ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ವೆಂಕಟೇಶ್, ಪ್ರೊ. ಹಿರೇಮಣಿ ನಾಯಕ್, ಸೇರಿದಂತೆ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.