ಶಂಕರಘಟ್ಟ : ಆಹಾರ ತಂತ್ರಜ್ಞಾನ ಹಾಗೂ ಕೃಷಿ ಅಧ್ಯಯನ ಒಂದಕ್ಕೊಂದು ಅವಲಂಬಿತವಾಗಿದ್ದು, ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿಶ್ವ ಬ್ಯಾಂಕ್ ನ ಅಂತರಾಷ್ಟ್ರೀಯ ಸಲಹೆಗಾರ ಡಾ. ರವಿಶಂಕರ್ ಗೋಕರೆ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಜೀವರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಜೀವರಸಾಯನ ಶಾಸ್ತ್ರ ಸಂಶೋಧನೆಯ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಆಹಾರ ತಂತ್ರಜ್ಞಾನವು ಅನ್ವಯಿಕ ಶಾಸ್ತ್ರವಾಗಿದ್ದು, ದೇಶಕ್ಕೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಹಾರ ಸಂರಕ್ಷಣೆ, ಪೌಷ್ಟಿಕಾಂಶ ವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲಾಗಿರುವ ಸ್ನಾತಕೋತ್ತರ ಆಹಾರ ತಂತ್ರಜ್ಞಾನ ವಿಭಾಗವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲ ಸಚಿವೆ ಜಿ.ಅನುರಾಧ, ಮೈಸೂರು ವಿಶ್ವವಿದ್ಯಾಲಯದ ಪ್ರೊ.ಮಧುಸೂದನ, ಡಾ.ರಮಾನಂದ್ ನಾಡಿಗ, ಮಂಗಳೂರು ವಿವಿಯ ಪ್ರೊ. ಮಂಜುನಾಥ್, ಪ್ರೊ. ಗೋಪಾಲ್ ಮರಾಠೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.