ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 

ಶಿವಮೊಗ್ಗ: ಕುವೆಂಪು ಅವರ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸಸ್ಸು ಸಾಧ್ಯ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಹೇಳಿದ್ದಾರೆ. ಅವರು ಇಂದು ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ೨೦೨೨ -೨೩ ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬುದ್ಧಿಮತ್ತೆ ಇದ್ದರೆ ಮಾತ್ರ ಬದುಕು ಎನ್ನುವ ಕಾಲ ಹೋಯ್ತು. ಈಗ ಐಕ್ಯೂ ಜೊತೆಗೆ ಇ.ಕ್ಯೂ, ಆರ್.ಕ್ಯೂ ಮತ್ತು ಹೆಚ್.ಕ್ಯೂ. ಅಳವಡಿಸಿಕೊಳ್ಳಬೇಕು. ಇ.ಕ್ಯೂ.ಎಂದರೆ ನಮ್ಮಲ್ಲಿರುವ ಭಾವನೆಗಳ ನಿಯಂತ್ರಣ, ಆರ್.ಕ್ಯೂ ಎಂದರೆ ಸಂಬಂಧಗಳ ಅಳವಡಿಕೆ, ಹೆಚ್.ಕ್ಯೂ ಎಂದರೆ ಆಧ್ಯಾತ್ಮ. ಐಕ್ಯೂ ಜೊತೆಗೆ ಈ ಮೂರು ವಿಷಯಗಳು ಹಾಲು ಸಕ್ಕರೆಯ ರೂಪದಲ್ಲಿ ಬೆರೆತಾಗ ?ತ್ತಮ ದಾರಿಗೆ ಹೋಗಲು ಸಾಧ್ಯವಾಗುತ್ತದೆ ಎಂದರು.

ವಿಶ್ವಪಥ ಎಂದರೆ ಬದುಕಿನಲ್ಲಿ ವಿಶ್ವದ ಎಲ್ಲಾ ಆಗುಹೋಗುಗಳು, ಅವಕಾಶಗಳು ನಿಮ್ಮ ಬದುಕಿನ ಪಥದಲ್ಲಿ ಕಲ್ಪನೆಗೆ ನಿಲುಕುವಂತಿರಬೇಕು. ಸರ್ವೋದಯ ಎಂದರೆ ಎಲ್ಲರ ಏಳಿಗೆ, ತಿಳಿವಳಿಕೆ, ಜ್ಞಾನ ಭಂಡಾರ ಸಂಪಾದನೆ ಮಾಡಬೇಕು  ಕೆಎಎಸ್ ಮಾಡಬೇಕು. ಕೆಎಎಸ್ ಅಂದರೆ ನಾಲೆಡ್ಜ್, ಆಟಿಟ್ಯೂಡ್ ಮತ್ತು ಸ್ಕಿಲ್. ಇದನ್ನು ಅಭಿವೃದ್ಧಿಗೊಳಿಸಬೇಕು. ಸಮನ್ವಯ ಎಂದರೆ ಮಾತನಾಡುವ ರೀತಿ, ಬದುಕುವ ರೀತಿಯಿಂದಾಗಿ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುವಂತಿರಬೇಕು. ಕಾಲ್ಪನಿಕ ಜೀವನದ ಅರಿವಿನಲ್ಲಿ ಓಲಾಡುತ್ತಿರುವ ನಾವು ವಾಸ್ತವಿಕ ಜೀವನಕ್ಕೆ ಬರಬೇಕು. ಪೂರ್ಣದೃಷ್ಟಿ ಎಂದರೆ ಬದುಕನ್ನು ಧನಾತ್ಮ ಚಿಂತನೆಯಿಂದ ಪ್ರಾರಂಭಿಸಬೇಕು. ಸಕಾರಾತ್ಮಕತೆಯನ್ನು ಬದುಕಿನಲ್ಲಿ ಅಳವಡಿಸಕೊಳ್ಳಬೇಕು ಎಂದರು. 

ಸದ್ಭಾವನೆ ಮತ್ತು ಸದ್ವಿಚಾರದ ಚಿಂತನೆಗಳನ್ನು ಅಳವಡಿಸಿಕೊಂಡಾಗ ಕ್ರಿಯಾತ್ಮಕ, ಸೃಜನಾತ್ಮಕ  ಧನಾತ್ಮಕ ಕಂಪನಗಳು ಬದುಕಿನಲ್ಲಿ ಉಂಟಾಗುತ್ತವೆ. ಒಟ್ಟಾರೆಯಾಗಿ. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಮನುಜಮಥದತ್ತ ಸಾಗಿದಾಗ ಮಾತ್ರ ಕನಸುಗಳು ನನಸಾಗಲು ಸಾಧ್ಯ ಎಂದರು.

ಕುವೆಂಪು ವಿವಿ ಕುಲಪತಿ ಪ್ರೊ ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕುವೆಂಪು ವಿವಿ ಭಾರತದಲ್ಲೇ ೭೩ ನೇ ಸ್ಥಾನ ಗಳಿಸಿ ರಾಜ್ಯದಲ್ಲಿ ಅಗ್ರ ಸ್ಥಾನದಲ್ಲಿದೆ. ಶಿಕ್ಷಣ ಕ್ಷೇತ್ರದ ಆಳ ತಿಳಿಯುವುದು ಅತ್ಯಂತ ಕಷ್ಟದ ಸಂಗತಿ. ಶಿಕ್ಷಣ ಸಾಮ್ರಾಜ್ಯ ವಿಸ್ತರಣೆ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯ ಒಬ್ಬ ಶಿಕ್ಷಕನಿಗೆ ಯಾವ ಜವಾಬ್ದಾರಿ ಇರಬೇಕೆಂದರೆ ಆತ ವಿದ್ಯಾರ್ಥಿಗಳ ಮನದಾಳದಲ್ಲಿ ಇಳಿಯಬೇಕು. ಶಿಕ್ಷಣದಲ್ಲಿ ಹೊಸತನ ಆವಿಷ್ಕಾರಗಳು ಬರಬೇಕು. ಚಿಂತನ ಮಂಥನ ಆಗಬೇಕು. ಕೌಶಲ್ಯಗಳನ್ನು ಕಲಿಯಬೇಕು. ಎಲ್ಲವನ್ನೂ ತಿಳಿದು ಪಡೆದುಕೊಳ್ಳಬೇಕು ಎಂದರು.

ಭಾರತದಲ್ಲಿ ಉತ್ತಮ ಪ್ರಜೆ ಆಗಲು ಆಯಕೆ ಆಗುವುದಿಲ್ಲ ಎಂದರೆ ಇಲ್ಲಿ ಹಸಿವು, ಬಡತನ, ದಾರಿದ್ರ್ಯ ಇದೆ. ಯುವಕ ಯುವತಿಯರು ದೇಶದ ಸಾಮಾಜಿಕ, ಆರ್ಥಿ ಅಭಿವೃದ್ಧಿಗೆ ಪಣತೊಡಬೇಕು. ವಿದೇಶದಲ್ಲಿ ಶಿಕ್ಷಣದ ಜೊತೆಗೆ ದಿನವಿಡಿ ದುಡಿದು ತಾವು ಅಭಿವೃದ್ಧಿಯಾಗುವುದರ ಜೊತೆಗೆ ರಾಷ್ಟ್ರಕ್ಕೂ ಕೊಡುಗೆ ನೀಡುತ್ತಾರೆ. ಆದರೆ, ನಮ್ಮ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ೧೦ ಗಂಟೆಗೆ ಬರುವ ನೌಕರರು ಬಯೋಮೆಟ್ರಿಕ್ ಅಳವಡಿಸಿದ್ದರೂ ತಡವಾಗಿ ಬರುತ್ತಾರೆ ನಮ್ಮ ಮನಸ್ಸನ್ನು ನಾವು ಗೆಲ್ಲಲು ಕಾಯಕ ತತ್ವ ಅಳವಡಿಸಿಕೊಳ್ಳಬೇಕು. ಅದು ಇನ್ನೊಬ್ಬರನ್ನು ಮೆಚ್ಚಿಸಲು ಅಲ್ಲ. ಕಾಯಕದಿಂದ ಓಡಿ ಹೋದರೆ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಗೆ ಮುಖ್ಯವಾದುದು ಸಾಮಾಜಿಕ, ನೈತಿಕ, ರಾಜಕೀಯ ಮೌಲ್ಯಗಳು. ನಮ್ಮ ಹಕ್ಕನ್ನು ಕೇಳುತ್ತೇವೆಯೇ ಹೊರತೂ ಕರ್ತವ್ಯದ ಬಗ್ಗೆ ಯಾರೂ ಗಮನಹರಿಸುವುದಿಲ್ಲ. ಮೊದಲು ನಮ್ಮ ಕರ್ತವ್ಯ ಮಾಡಬೇಕು. ಬಳಿಕ ಹಕ್ಕನ್ನು ಕೇಳಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ೨೦೨೧- ೨೨ ನೇ ಸಾಲಿನಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಕುವೆಂಪು ವಿವಿ ಶಿಕ್ಷಣ ನಿಕಾಯದ ಡೀನ್ ಮತ್ತು ಪ್ರಾಧ್ಯಾಪಕರಾದ ಡಾ. ಗೀತಾ ಸಿ., ಖ್ಯಾತ ಗಾಯಕಿ ಸುರೇಖಾ ಹೆಗ್ಡೆ ಇದ್ದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಹೆಚ್. ಶ್ರೀಕಾಂತ್ ಅಧ್ಯಕ್ಷತೆ ವಹಸಿದ್ದರು. ಹೆಚ್.ಬಿ. ಆದಿಮೂರ್ತಿ, ಬಿ.ಎಸ್. ಆಶಿತ್, ಸಿ.ಪಿ. ನಾಗರಾಜ್, ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಧು ಜಿ., ಮೊದಲಾದವರಿದ್ದರು.