ಕೆ.ಎಸ್.ಈಶ್ವರಪ್ಪಗೆ 74ನೇ ಹುಟ್ಟುಹಬ್ಬದ ಸಂಭ್ರಮ

ಶಿವಮೊಗ್ಗ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ 74ನೇ ಹುಟ್ಟುಹಬ್ಬದ ಸಂಭ್ರಮ. ಮಾಜಿ ಉಪ ಮುಖ್ಯಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಪರಿಷತ್ ವಿಪಕ್ಷ ನಾಯಕನಾಗಿ, ಇಂಧನ ಖಾತೆ, ಕಂದಾಯ, ಜಲ ಸಂಪನ್ಮೂಲ ಸಚಿವರಾಗಿ, ಗ್ರಾಮೀಣಾಭಿವೃದ್ಧಿ, ಕ್ರೀಡಾ ಸಚಿವರಾಗಿ ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.

ಅಂತಹ ರಾಜಕಾರಣಿಗೆ ಈಗ ೭೪ನೇ ಹುಟ್ಟುಹಬ್ಬದ ಸಂಭ್ರಮ. ಪ್ರತಿ ವರ್ಷವು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಕೆ.ಎಸ್.ಈಶ್ವರಪ್ಪ ಹುಟ್ಟುಹಬ್ಬದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಗಳನ್ನು ಆಯೋಜನೆ ಮಾಡಲಾಗಿದೆ.

ಪರಿಕ್ರಮ ಶೀರ್ಷಿಕೆಯಡಿ ಪ್ರಗತಿ-ಪ್ರಕೃತಿ ಜೊತೆ ಜೊತೆಗೆ ಎಂಬ ಘೋಷವಾಕ್ಯದೊಂದಿಗೆ ಸೈಕಲ್ ಜಾಥಾ ಕೂಡ ಬೆಳಗ್ಗೆ ನಡೆಯಿತು. ಬೆಕ್ಕಿನಕಲ್ಮಠ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ ಗಿಡ ನಡುವ ಮೂಲಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಪಾಲಿಕೆ ಸದಸ್ಯರು ಸೇರಿದಂತೆ ನೂರಾರು ಮಂದಿ ಭಾಗಿಯಾಗಿ ಸೈಕಲ್ ತುಳಿದರು. ಹಾಗೇನೆ ಕೆ.ಈ.ಕಾಂತೇಶ್, ಕೆಎಸ್‌ಈ ಹುಟ್ಟುಹಬ್ಬದ ಪ್ರಯುಕ್ತ ಹೊಸಮನೆ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಣೆ ಮಾಡಿದರು.

ಕ್ರೀಡಾಕೂಟ ಕಾರ್ಯಕ್ರಮ 

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹುಟ್ಟು ಹಬ್ಬದ ಪ್ರಯುಕ್ತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕ್ರೀಡಾ ವಿಕ್ರಮ ಎಂಬ ಶೀರ್ಷಿಕೆಯಡಿ ಜೂನ್ 10,11 ರಂದು ನೆಹರು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಸಂಜೆ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಚಾಲನೆ ನೀಡಲಿದ್ದಾರೆ. ಹಾಗೇನೆ ಕೆಎಸ್‌ಈ ಹುಟ್ಟುಹಬ್ಬದ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.