ಬೆಂಗಳೂರು : ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು ಈ ನಡುವೆ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈಶ್ವರಪ್ಪ ಈ ಭೇಟಿ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಬೊಮ್ಮಾಯಿ ಜೊತೆ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಗುತ್ತಿಗೆದಾರರಿಂದ ಶೇ.೪೦ ಕಮಿಷನ್‌ಗೆ ಬೇಡಿಕೆಯಿಟ್ಟ ಆರೋಪದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈಶ್ವರಪ್ಪ, ಮತ್ತೆ ಸಂಪುಟ ಸೇರುವ ಕುರಿತು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕ್ಷೇತ್ರದಲ್ಲೇ ಇದ್ದ ಈಶ್ವರಪ್ಪ, ಒಂದೆರೆಡು ಬಾರಿ ಮಾತ್ರ ಬೆಂಗಳೂರಿಗೆ ತೆರಳಿ ಸಿಎಂ ಭೇಟಿಯಾಗಿದ್ದರು. ಇದೀಗ ಸಿಎಂ ದೆಹಲಿಗೆ ತೆರಳುತ್ತಿರುವ ವೇಳೆ ಮತ್ತೆ ಸಿಎಂ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.