ಮಕ್ಕಳನ್ನು ದೇವಿಯ ಮಡಿಲ ಮೇಲೆ ಯಾಕೆ ಕೂರಿಸ್ತಾರೆ? 

ಶಿವಮೊಗ್ಗ :  ನಮ್ಮ ಯಾವುದೇ ಹಬ್ಬವಿರಲಿ, ಜಾತ್ರೆಯಿರಲಿ, ಅಲ್ಲಿ ಹಲವು ವಿಶೇಷತೆಗಳು, ಧಾರ್ಮಿಕ ಆಚರಣೆಗಳು, ಹಿನ್ನೆಲೆ, ಹಾಗೂ ಸಂಪ್ರದಾಯಗಳು ಇರ್‍ತವೆ. ಅದೇ ರೀತಿ ಕೋಟೆ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯಲ್ಲಿಯೂ ಹಲವು ವಿಶೇಷಗಳಿವೆ. ವಿಶೇಷ ಧಾರ್ಮಿಕ ಆಚರಣೆಗಳಿವೆ. ಜಾತ್ರೆ ವೇಳೆಯಲ್ಲಿ ದೇವಿಯ ಮಡಿಲಲ್ಲಿ ಮಕ್ಕಳನ್ನು ಕೂರಿಸುವುದು ಕೂಡ ಈ ಮಾರಿಜಾತ್ರೆಯ ವಿಶೇಷ. ಹಾಗಿದ್ರೆ ಯಾಕೆ ಈ ಆಚರಣೆ ರೂಡಿಯಲ್ಲಿದೆ?. ಮಕ್ಕಳನ್ನು ದೇವಿಯ ಮಡಿಲ ಮೇಲೆ ಯಾಕೆ ಕೂರಿಸ್ತಾರೆ?. ಜೊತೆಗೆ ದೇವಿಗೆ ವಿವಿಧ ಬಗೆಯ ನೈವೇದ್ಯಗಳನ್ನು ಯಾಕೆ ಅರ್ಪಣೆ ಮಾಡ್ತಾರೆ ಅನ್ನೋದರ ಕುರಿತು ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್.

ಮಾನವನು ಸಂಕಟ ಬಂದಾಗ ದೇವರ ಮೊರೆ ಹೋಗ್ತಾನೆ. ತನ್ನೆಲ್ಲ ಸಂಕಷ್ಟಗಳನ್ನು ಬಗೆಹರಿಸುವಂತೆ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಅದರಲ್ಲೂ ಕೆಲ ದೇವಮಂದಿರಗಳಲ್ಲಿ ನಾವು ಪ್ರಾರ್ಥಿಸಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ನಮ್ಮ ವಿಜ್ಞಾನದಿಂದ ಬಗೆಹರಿಸಲಾಗದ ಎಷ್ಟೋ ಸಮಸ್ಯೆಗಳಿಗೆ ದೇವರ ಬಳಿ ಉತ್ತರ ಇರುತ್ತದೆ. ಆದ್ದರಿಂದ ಮಾನವ ಬಗೆಹರಿಯದ ತನ್ನ ಹಲವು ಸಮಸ್ಯೆಗಳಿಗೆ ದೇವರ ಬಳಿ ಹೋಗುವುದು  ಸಾಮಾನ್ಯ.

ಹಿಂದಿನ ಕಾಲದಲ್ಲಿ ಹಲವು ರೋಗಗಳಿಂದಾಗಿ ಮಾನವ ತತ್ತರಿಸಿಹೋಗಿದ್ದ. ಆ ಸಮಯದಲ್ಲಿ ವೈದ್ಯಕೀಯ ಕ್ಷೇತ್ರವು ಇಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ. ಖಾಯಿಲೆಯಿಂದಾಗಿ ಅದೇಷ್ಟೋ ಜನರು ಸತ್ತಿದ್ದಾರೆ. ಅದರಲ್ಲೂ ಎಳೆ ಮಕ್ಕಳಿಗೆ ಬರುವಂತಹ ರೋಗಕ್ಕೆ ಯಾವುದೇ ಔಷಧಿ, ಪರಿಹಾರಗಳು ಇರ್‍ತಾಯಿರಲಿಲ್ಲ. ಆ ಸಮಯದಲ್ಲಿ ಮಾನವನಿಗೆ ಕಾಣುತ್ತಿದ್ದ ಒಂದೇ ಒಂದು ಔಷಧಿಯೆಂದರೆ ಅದು ಮಾರಮ್ಮ ದೇವಿ.

ಶಿವಮೊಗ್ಗ ಮಾರಿಕಾಂಬ ಜಾತ್ರೆಯಲ್ಲಿ ದೇವಿಯ ಗದ್ದುಗೆ ಹಾಗೂ ದೇವಿಯ ಮೇಲೆ ಮಕ್ಕಳನ್ನು ಕೂರಿಸುವಂತಹ ಒಂದು ಆಚರಣೆಯಿದೆ. ಅಮ್ಮನ ಪ್ರತಿಷ್ಠಾಪನೆಯಾದ ಮೇಲೆ ಗದ್ದುಗೆಯ ಮೇಲೆ ಮಕ್ಕಳನ್ನು ಕೂರಿಸಲಾಗುತ್ತದೆ. ಅದಕ್ಕು ಮೊದಲು ಗಾಂಧಿ ಬಜಾರ್‌ನಲ್ಲಿ ದೇವಿಯನ್ನು ಕೂರಿಸಿದ್ದಲ್ಲಿ ಮಕ್ಕಳನ್ನು ಅಮ್ಮನ ಮಡಿಲ ಮೇಲೆ ಕೂರಿಸಲಾಗುತ್ತದೆ. ಈ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಪಾಲಿಸುತ್ತಾ ಬರಲಾಗಿದೆ. ಹಾಗಿದ್ರೆ ಯಾಕೆ ಈ ಆಚರಣೆ ಮಾಡಲಾಗುತ್ತದೆ.

ಅಮ್ಮನು ಮಗುವನ್ನು ಶ್ರೀರಕ್ಷೆಯಾಗಿ ಕಾಯುತ್ತಾಳೆ ಎಂಬ ನಂಬಿಕೆಯಿದೆ. ಮಗು ಬೆಳೆಯಬೇಕೆಂದರೆ ಅದಕ್ಕೆ ಆರೋಗ್ಯ, ಶಿಕ್ಷಣ, ಶಕ್ತಿ ಬೇಕು. ಆ ಎಲ್ಲವನ್ನು ಅಮ್ಮ ನೀಡುತ್ತಾಳೆ ಎಂಬ ಭಕ್ತಿ ಜನರಲ್ಲಿದೆ. ಅಲ್ಲದೇ ಇಡೀ ಮಾನವ ಕುಲದ ತಾಯಿಯಾಗಿರುವ ಮಾರಮ್ಮ ನಮ್ಮ ಮಕ್ಕಳನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗೂ ಮಕ್ಕಳಿಗೆ ಯಾವುದೇ ಖಾಯಿಲೆಗಳು ಬಾರದಂತೆ ದೇವಿ ಕಾಯುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳ ರಕ್ಷಣೆಗಾಗಿ ದೇವಿಯಲ್ಲಿ ಹರಕೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಅಮ್ಮನ ಬಳಿ ನಮಗೆ ಮಕ್ಕಳಾಗಲಿ ಎಂದು ಹರಕೆ ಹೊತ್ತಿರುತ್ತಾರೆ. ಇವರೆಲ್ಲ ಜಾತ್ರೆಯ ವೇಳೆ ಮಕ್ಕಳಿಗೆ ಬೇವುಡಿಸಿ, ದೇವಿಯ ಮಡಿಲು ತುಂಬಿಸಿ, ದೇವಿಗೆ ಮಂಗಳದ್ರವ್ಯ ಅರ್ಪಿಸಿ, ತಮ್ಮ ಮಕ್ಕಳನ್ನು ದೇವಿಯ ಮಡಿಲ ಮೇಲೆ ಕೂರಿಸಿ ತಮ್ಮ ಹರಕೆ ತೀರಿಸುವುದು ವಾಡಿಕೆಯಾಗಿದೆ.

ಪ್ರತಿ ಹಬ್ಬ ಹರಿದಿನಳಲ್ಲಿಯೂ ನಾವು ದೇವರಿಗೆ ವಿಶೇಷವಾದ ನೈವೇದ್ಯಗಳನ್ನು ಅರ್ಪಿಸಿ, ಪ್ರಾರ್ಥಿಸುತ್ತೇವೆ. ಅದೇ ರೀತಿಯಾಗಿ ಕೋಟೆ ಮಾರಿಕಾಂಬ ದೇವಿಗೂ ಕೂಡ ವಿಧ ವಿಧವಾದ ನೈವೇದ್ಯಗನ್ನು ಅರ್ಪಿಸಲಾಗುತ್ತದೆ. ಅದರಲ್ಲಿ ಮೊದಲನೇ ದಿನ ಎಳನೀರು, ಹೋಳಿಗೆ, ಕೋಸಂಬರಿ, ಮೊಸರನ್ನದಂತಹ ಸಿಹಿ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಹಾಗಿದ್ರೆ ಯಾಕೆ ಈ ರೀತಿಯಾದ ವಿಧ ವಿಧವಾದ ನೈವೇದ್ಯವನ್ನು ಅರ್ಪಿಸಲಾಗುತ್ತದೆ?.

ದೇವಿಯು ತಂಪಾಗಿರಲಿ ಎಂಬ ಕಾರಣಕ್ಕೆ ಎಳನೀರು ಹಾಗೂ ಮೊಸರನ್ನವನ್ನು ಅರ್ಪಿಸಲಾಗುತ್ತದೆ. ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಹೋಳಿಗೆಯನ್ನು ಅಮ್ಮನಿಗೆ ನೈವೇದ್ಯ ನೀಡಲಾಗುತ್ತದೆ. ಲಕ್ಷಾಂತರ ಮಂದಿ ದೇವಿಯ ದರ್ಶನಕ್ಕೆ ಬರ್‍ತಾರೆ. ಒಬ್ಬಬ್ಬರು ಒಂದೊಂದು ಬಯಕೆಯನ್ನು ಹೊಂದಿರುತ್ತಾರೆ. ಆ ಎಲ್ಲಾ ಬಯಕೆಗಳು ಅಮ್ಮನು ಈಡೇರಿಸಲಿ ಎಂದು ಅಮ್ಮನಿಗೆ ವಿವಿಧ ರೀತಿಯ ಸಿಹಿ ನೇವೇದ್ಯವನ್ನು ಅರ್ಪಿಸಲಾಗುತ್ತದೆ.

ಅದೇನೆ ಇದ್ರು ಅಮ್ಮ ನಮ್ಮನ್ನೆಲ್ಲಾ ಕಾಯುತ್ತಾಳೆ. ನಮ್ಮೆಲ್ಲರ ಪ್ರಾರ್ಥನೆಯನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ. ಆ ನಂಬಿಕೆ ಹಾಗೂ ಅಮ್ಮನ ಅನುಗ್ರಹದಿಂದ ಎಲ್ಲವೂ ಸಾಧ್ಯವಾಗುತ್ತಿದೆ. ಅಮ್ಮ ನಮ್ಮೆಲ್ಲರನ್ನು ಮಕ್ಕಳಂತೆ ಭಾವಿಸಿ ನಮಗೆ ಶ್ರೀರಕ್ಷೆ ನೀಡುತ್ತಾಳೆ ಎಂಬ ಕಾರಣಕ್ಕಾಗಿಯೇ ಹಲವು ಸಂಪ್ರದಾಯ, ಆಚರಣೆಗಳು ಇನ್ನೂ ಕೂಡ ರೂಡಿಯಲ್ಲಿವೆ.

ಬ್ಯೂರೋ ರಿಪೋರ್ಟ್ ಕನ್ನಡ ಮೀಡಿಯಂ ೨೪*೭ ಸಂಭವಿಸು ಸಮಸ್ತರ ನಡುವೆ.