ಶಿವಮೊಗ್ಗ : ಮಂಡ್ಲಿಯ ಸರ್ವೆ ನಂಬರ್ 257ರಲ್ಲಿರುವ 1 ಎಕರೆ 19 ಗುಂಟೆ ಜಾಗವನ್ನ ಶಿವಮೊಗ್ಗದ ಉಪವಿಭಾಗಾಧಿಕಾರಿಗಳು ಓಪನ್ ಏರ್ ಮ್ಯೂಸಿಯಂ ಮಾಡಲು ಆದೇಶಿಸಿರುವುದರ ಕುರಿತಾಗಿ ಜಮಿಯಾ ಮಸೀದಿ ಸವಾಯಿಪಾಳ್ಯದ ವತಿಯಿಂದ ಮಾಧ್ಯಮಗೋಷ್ಠಿ ನಡೆಸಲಾಯಿತು.
ಈ ಕುರಿತು ಮಾತನಾಡಿದ ಜಾಮಿಯಾ ಮಸೀದಿ ಅಧ್ಯಕ್ಷ ಸೈಯದ್ ಮುಸ್ತಾಫಾ, ಈ ಜಾಗದಲ್ಲಿ ಹಿಂದಿನಿಂದಲು ನಮ್ಮ ಪೂರ್ವಜರ ಸಮಾಧಿಗಳಿವೆ. ಈ ಸಂಬಂಧ ಮುನ್ಸಿಪಲ್ ಹಾಗೂ ರೆವಿನ್ಯೂ ದಾಖಲೆಗಳಲ್ಲಿ 1944 ರಿಂದ 1991 ರವರೆಗೂ ಮುಸಲ್ಮಾನರ ಖಬರಸ್ಥಾನ್ ಯಾನೆ ಗುಂಡುತೋಪೆಂದು ನಮೂದಾಗಿದೆ. ಆ ನಂತರ ದಿಢೀರನೇ ಅಧಿಕಾರಿಗಳು ಮುಸಲ್ಮಾನರ ಖಬರಸ್ಥಾನ್ ಎಂಬ ಪದವನ್ನು ದಾಖಲೆಯಿಂದ ತೆಗೆದಿದ್ದಾರೆ. ಇದು ಹೇಗಾಯಿತು ಎಂದು ಮೊದಲು ಪರಿಶೀಲಿಸಬೇಕು ಎಂದರು. ವಕೀಲರಾದ ಹೆಚ್.ಜಿ.ನಯಾಜ್ ಅಹ್ಮದ್ ಖಾನ್ ಅವರು ಮಾತನಾಡಿ, ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಸಹ ಅಧಿಕಾರಿಗಳು ಅವಸರ ಮಾಡಿದರು ಎಂದು ಆಕ್ಷೇಪಿಸಿದ್ರು.
ಜಾಗಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ ಎಂದು ಉಪವಿಭಾಗಾಧಿಕಾರಿಗಳು ಒಪ್ಪಿಕೊಂಡರೂ ವ್ಯತಿರಿಕ್ತ ಆದೇಶ ನೀಡಿದ್ದಾರೆ. ದಾಖಲೆಗಳಿಗೆ ಮಾನ್ಯತೆ ಕೊಡದೆ ಓಪನ ಏರ್ ಮ್ಯೂಸಿಯಂ ಮಾಡಲು ಆದೇಶಿಸಿರುವುದು ಕಾನೂನು ವಿರುದ್ಧವಾಗಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಷಯದ ಬಗ್ಗೆ ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದ್ದು, ಮುಂದಿನ ದಿನಗಳಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ವಕೀಲರಾದ ಹೆಚ್.ಜಿ.ನಯಾಜ್ ಅಹ್ಮದ್ ಖಾನ್, ಆರೀಫ್, ಜಮಿಯಾ ಮಸೀದಿ ಸವಾಯಿಪಾಳ್ಯದ ಉಪಾಧ್ಯಕ್ಷ ಮುಖ್ತಿಯಾರ್ ಅಹಮದ್, ಕಾರ್ಯದರ್ಶಿ ಸೈಯದ್ ಮುಯಿದ್ದೀನ್, ಪಾಲಿಕೆ ಸದಸ್ಯ ಜಿಲಾನ್ ಖಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.