ಶಿವಮೊಗ್ಗ : ಮಂಗಳವಾರ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದಲ್ಲಿ ನಡೆದ ಗಲಾಟೆಯಿಂದಾಗಿ ಕೆಲವರಿಗೆ ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ವಿದ್ಯಾರ್ಥಿಗಳನ್ನ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಭೇಟಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸದಸ್ಯರು, ಘಟನೆಯ ಕುರಿತಾಗಿ ಮಾಹಿತಿ ಪಡೆದುಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ಕಿವಿಮಾತು ಹೇಳಿದರು. ಹಾಗೆಯೇ ಗಾಯಾಳು ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ತುಂಬಿದರು. ನಂತರ ಆಸ್ಪತ್ರೆಯ ಸರ್ಜನ್ ಶ್ರೀಧರ್ ಅವರನ್ನ ಭೇಟಿ ಮಾಡಿ ವಿದ್ಯಾರ್ಥಿಗಳ ಆರೋಗ್ಯದ ಕುರಿತಾಗಿ ಮಾಹಿತಿ ಪಡೆದುಕೊಂಡರು. ಈ ವೇಳೆ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್, ಕಾಂಗ್ರೆಸ್ ಮುಖಂಡ ರಂಗನಾಥ್ ಹಾಗೂ ಇನ್ನಿತರರು ಇದ್ದರು.