ಬಿಜೆಪಿಯಲ್ಲಿದ್ದಾಗಲು ಸೊನ್ನೆ ಕಾಂಗ್ರೆಸಿನಲ್ಲಿಯೂ ಸೊನ್ನೆ

ಸಾಗರ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನನ್ನನ್ನು ವಲಸಿಗ ಎಂದು ಟೀಕೆ ಮಾಡಿದ್ದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ರಾಜಕಾರಣದಲ್ಲಿ ವಲಸೆ ಸಹಜ. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಕೇರಳಕ್ಕೆ ಬಂದಿದ್ದು, ಡಿ.ಕೆ.ಶಿವಕುಮಾರ್ ಸಾತನೂರಿನಲ್ಲಿ ಸ್ಪರ್ಧೆ ಮಾಡಿದ್ದು, ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದು ವಲಸೆ ರಾಜಕಾರಣವಲ್ಲವೇ ಎಂದು ಶಾಸಕ ಹರತಾಳು ಹಾಲಪ್ಪ ತಿರುಗೇಟು ನೀಡಿದರು.

ಸಾಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲೂ ಹಾಲಿ ಕ್ಷೇತ್ರ ಬಿಟ್ಟು ಮತ್ತೊಂದು ಕಡೆ ಹೋಗಿ ಸ್ಪರ್ಧೆ ಮಾಡಿದ ಉದಾಹರಣೆ ಇದೆ. ಗೋಪಾಲಕೃಷ್ಣ ಬಿಜೆಪಿಯಲ್ಲಿದ್ದಾಗ ಸೊನ್ನೆಯಾಗಿದ್ದರು. ಈಗ ಕಾಂಗ್ರೆಸ್‌ನಲ್ಲೂ ಸೊನ್ನೆಯಾಗಿದ್ದಾರೆ. ಇದೀಗ ಸಾಗರ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದೇ ಅನುಮಾನ. ಇಷ್ಟು ವರ್ಷಗಳ ಕಾಲ ಸ್ವಂತ ಮನೆ ಮಾಡದೆ ಐಬಿಯಲ್ಲಿ ವಾಸವಿದ್ದ ಬೇಳೂರು ಇದೀಗ ಗಾಂಧಿನಗರದಲ್ಲಿ ಮನೆ ಮಾಡಿಕೊಂಡು ಹಂದಿ ಕಾಟ ಎನ್ನುತ್ತಿದ್ದಾರೆ. ಒಂದರ್ಥದಲ್ಲಿ ಮಾಜಿ ಶಾಸಕರದ್ದು ಹತಾಶ ರಾಜಕಾರಣ ಎಂದು ಕಿಡಿಕಾರಿದರು.