ಚಿಕ್ಕಮಗಳೂರಿನಲ್ಲಿ 8 ಆರೋಪಿಗಳು ಶರಣಾಗತಿ

ಶಿವಮೊಗ್ಗ : ಜುಲೈ ೧೪ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ಮುಂಭಾಗದ ವೃತ್ತದಲ್ಲಿ ಹೊನ್ನಪ್ಪ ಅಲಿಯಾಸ್ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಹಂದಿ ಅಣ್ಣಿಯನ್ನು ನಾವೇ ಕೊಲೆ ಮಾಡಿದ್ದು ಎಂದು ತಿಳಿಸಿ ೮ ಮಂದಿ ಆರೋಪಿಗಳು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ. ಪೊಲೀಸರ ಕೈಗೆ ಸಿಗದ ಆರೋಪಿಗಳು ಅಂತಿಮವಾಗಿ ಚಿಕ್ಕಮಗಳೂರಿನ ಎಸ್ಪಿ ಅಕ್ಷಯ್ ಅವರ ಕಚೇರಿಗೆ ಬಂದು ಶರಣಾಗಿದ್ದಾರೆ. ಆದ್ರೆ ಇದು ಶರಣಾಗತಿಯೋ ಅಥವಾ ಹತ್ಯೆಯ ಮೂಲ ಸಂಚುಕೋರರನ್ನು ರಕ್ಷಿಸಲು ನಡೆಸಿರುವ ಮತ್ತೊಂದು ಷಡ್ಯಂತ್ರವಾ ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿವೆ. ಆರೋಪಿಗಳನ್ನು ಚಿಕ್ಕಮಗಳೂರು ಕೋರ್ಟ್ ಮುಂದೆ ಹಾಜರುಪಡಿಸಿ ನಂತರ ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ನಾನಾ ಅನುಮಾನಗಳಿಗೆ ಕಾರಣವಾದ ಶರಣಾಗತಿ

ಕೊಲೆ ಮಾಡಿದ್ದು ನಾವೇ ಅಂತ ಚಿಕ್ಕಮಗಳೂರಿನಲ್ಲಿ ಶರಣಾಗಿರುವ ಆರೋಪಿಗಳು ಹೇಳ್ತಾ ಇದಾರೆ. ಇದುವೇ ಸಂಶಯಕ್ಕೆ ಕಾರಣವಾಗಿದೆ. ಹತ್ಯೆ ನಡೆದ ದಿನವೇ ಶಿವಮೊಗ್ಗದ ಎಸ್ಪಿ ಲಕ್ಷ್ಮಿ ಪ್ರಸಾದ್ ೪ ಪೊಲೀಸ್ ತಂಡಗಳನ್ನ ರಚನೆ ಮಾಡಿ, ಹಂತಕರಿಗೆ ಬಲೆ ಬೀಸಿದ್ದರು. ಇದೀಗ ಏಕಾಏಕಿ ಆರೋಪಿಗಳು ಚಿಕ್ಕಮಗಳೂರಿನಲ್ಲಿ ಶರಣಾಗಿರೋದು ಅನುಮಾನಗಳಿಗೆ ಕಾರಣವಾಗಿದೆ. ಮಾಸ್ಟರ್ ಮೈಂಡ್ ಬೇರೆ ಯಾರೋ ಇದ್ದಾರೆ ಅವರನ್ನು ರಕ್ಷಿಸಲು ಈ ಆರೋಪಿಗಳು ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮರಳು ಮಾಫಿಯಾ ವಿಚಾರಕ್ಕೆ ಕ್ಲಬ್ ಒಂದರಲ್ಲಿ ನಡೆದಿದ್ದ ಗಲಾಟೆಯೂ ಸಹ ಇದೀಗ ಬೆಳಕಿಗೆ ಬಂದಿದೆ. ಹತ್ಯೆ ಮಾಡಲು ಬಂದವರು ಬೆಂಗಳೂರು, ತುಮಕೂರಿನಿಂದ ಬಂದವರು ಅಂತ ಹೇಳಲಾಗಿತ್ತು. ಇದೀಗ ಶರಣಾಗಿರುವರು ಯಾರು..? ಅವರ ಹಿನ್ನೆಲೆ ಏನು ಅನ್ನೋದನ್ನು ಪೊಲೀಸರು ತನಿಖೆ ನಡೆಸ್ತಾಯಿದ್ದಾರೆ.