ಶಿವಮೊಗ್ಗ : ಮಳೆ ಬಂದ್ರೆ ಇಲ್ಲಿನ ಜನ್ರು ಪಡೋ ಗೋಳು ಅಷ್ಟಿಷ್ಟಲ್ಲ. ಮನೆಗಳಿಗೆ ನೀರು ನುಗ್ಗುತ್ತೆ. ಮುಖ್ಯರಸ್ತೆಯ ಮೇಲೆ ಹೆಜ್ಜೆ ಇಡಲು ಹೋದ್ರೆ ಪಾದಗಳು ನೆಲದಲ್ಲಿ ಹೂತು ಬಿಡುತ್ತವೆ. ವಾಹನ ಸಂಚಾರಕ್ಕೂ ಪರದಾಟ. ವರ್ಷಗಳೇ ಉರುಳಿದ್ರು ಇನ್ನು ಕೂಡ ಈ ಸಮಸ್ಯೆ ಬಗೆಹರಿದಿಲ್ಲ. ಇಷ್ಟೆಲ್ಲಾ ಸಮಸ್ಯೆ ಆಗಿರೋದು ಸ್ಮಾರ್ಟ್‌ಸಿಟಿ ಅಂತ ಕರೆಸಿಕೊಳ್ಳುವ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ. ಹಾಗಿದ್ರೆ ಇಲ್ಲಿನ ಜನರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವಂತಹ ಒಂದು ವರದಿ ಇಲ್ಲಿದೆ.
ಅಲ್ಲೊಂದು ರಸ್ತೆಯಿದೆ ಅದನ್ನು ಯಾರಾದ್ರು ರಸ್ತೆ ಅಂತ ಕರೆಯೋಕೆ ಆಗತ್ತ. ಭತ್ತದ ಸಸಿ ನಡೆಲು ಗದ್ದೆ ಹದ ಮಾಡಿದ ಹಾಗೆ ಕಾಣುತ್ತೆ. ಸ್ಮಾರ್ಟ್‌ಸಿಟಿ ಎಂದು ಕರೆಸಿಕೊಳ್ಳುವ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಇಂಥದೊಂದು ರಸ್ತೆಯಿದೆ. ಇದು ನೆನ್ನೆ ಮೊನ್ನೆಯಿಂದ ಹೀಗಾಗಿರುವ ರಸ್ತೆಯಲ್ಲ. ಹಲವಾರು ವರ್ಷಗಳಿಂದ ಇದು ಹೀಗೆ ಇದೆ. ಅಭಿವೃದ್ಧಿ ಕಾಣದೆ ಸ್ಥಳೀಯರ ಗೋಳಿಗೆ ಕಾರಣವಾಗಿದೆ. ಮಳೆ ಬಂದ್ರೆ ಸಾಕು ಇಲ್ಲಿನ ಕೆಲ ನಿವಾಸಿಗಳು ಅನುಭವಿಸುವ ಯಮಯಾತನೆ ಯಾರಿಗೂ ಬೇಡ. ಮನೆಗಳಿಗೆ ನುಗ್ಗುವ ನೀರು ರಾದ್ದಾಂತವನ್ನೇ ನಿರ್ಮಾಣ ಮಾಡ್ತಾಯಿದೆ. ಇದರಿಂದಾಗಿ ಮನೆಯಲ್ಲಿನ ಪಿಠೋಪಕರಣಗಳು ಹಾಳಾಗಿ ಹೋಗಿವೆ. ಮನೆ ಸ್ವಚ್ಛ ಮಾಡಿ ಮಾಡಿ ಕಾಯಿಲೆ ಬೀಳುವಂತಾಗಿದೆ. ಇಷ್ಟಾದ್ರು ನಮ್ಮನ್ನೂ ಯಾರು ಕೂಡ ಏನಂತ ವಿಚಾರಿಸಿಲ್ಲ ಎಂಬುದು ಸ್ಥಳೀಯರ ನೋವು.
ಇಷೆಲ್ಲ ಅವಾಂತರಕ್ಕೆ ಕಾರಣವಾಗ್ತಾಯಿರೋದು ಇಲ್ಲಿ ಹಾದು ಹೋಗ್ತಾಯಿರುವ ರಾಜಕಾಲುವೆ. ಹೌದು, ಸ್ವಾಮಿ ವಿವೇಕಾನಂದ ಬಡಾವಣೆ, ಗಾಡಿಕೊಪ್ಪದಲ್ಲಿ ನೀರನ್ನು ರಾಜಕಾಲುವೆ ಮೂಲಕ ಈಕಡೆಗೆ ಕಳುಹಿಸಲಾಗ್ತಾಯಿದೆ. ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗಲು ಆಗ್ತಾಯಿಲ್ಲ. ಹೀಗಾಗಿ ಅಲ್ಲಿಂದ ಉಕ್ಕಿ ಬರುವ ನೀರು ಗೋಪಾಲಗೌಡ ಬಡಾವಣೆಯ ಈ ಭಾಗಕ್ಕೆ ನುಗ್ತಾಯಿದೆ. ಆದ್ದರಿಂದ ಇಲ್ಲಿ ಹಾದು ಹೋಗಿರುವ ರಾಜಕಾಲವೆಯನ್ನು ಇನ್ನು ಆಳ ಹಾಗೂ ಅಗಲ ಮಾಡಬೇಕು. ಇಲ್ಲವಾದಲ್ಲಿ ಗೋಪಾಲಗೌಡ ಸಿ ಬ್ಲಾಕ್ ಅಲ್ಲಿರುವ ಈ ಸಮಸ್ಯೆ ಇಡೀ ಬಡಾವಣೆಗೆ ಬರಲಿದೆ. ಆದ್ದರಿಂದ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಗಳು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಅದೇನೆ ಇದ್ರು ಶಿವಮೊಗ್ಗವನ್ನು ಸ್ಮಾರ್ಟ್‌ಸಿಟಿ ಮಾಡ್ತೀವೆ, ಹಾಗ್ ಮಾಡ್ತೀವಿ, ಹೀಗ್ ಮಾಡ್ತೀವಿ ಅನ್ನೋರು ಒಂಚೂರು ಇಲ್ಲಿಗೆ ಭೇಟಿ ನೀಡಬೇಕು. ಇದು ಕೂಡ ಶಿವಮೊಗ್ಗದಲ್ಲಿಯೇ ಇದೆ. ಅದು ಕೂಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಇದೆ ಅನ್ನೋದನ್ನು ಮರಿಬಾರ್‍ದು. ಯಾಕೆಂದ್ರೆ ಇದೇ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆದಿರುವ ಬಡವಾಣೆಗಳ ದೃಶ್ಯವೇ ಬದಲಾಗಿದೆ. ಆದ್ರೆ ಗೋಪಾಲಗೌಡ ಬಡಾವಣೆಯಂಥಹ ಕೆಲ ಬಡಾವಣೆಗಳಲ್ಲಿ ಮೂಲಭೂತವಾಗಿ ಆಗ್ಬೇಕಿದ್ದ ಕೆಲಸಗಳೇ ಆಗಿಲ್ಲ. ಈ ರೀತಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಯಾಕೆಂದು ಜನರು ಪ್ರಶ್ನಿಸ್ತಾಯಿದ್ದಾರೆ.