ಶಿವಮೊಗ್ಗ : ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಪ್ರತಿಯೊಬ್ಬರಲ್ಲೂ ಎಚ್ಚರಿಕೆ ಇರುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ‘ಘನತೆಯ ಬದುಕು’ ಮಾಧ್ಯಮ ಮತ್ತು ಮಕ್ಕಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರ.
ಮಾಧ್ಯಮಗಳು ತರಾತರಿಯ ಧಾವಂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಮಕ್ಕಳ ಹಕ್ಕುಗಳ ಕುರಿತಾದ ಕಾಯ್ದೆಗಳು ಅತ್ಯಂತ ಕಠಿಣವಾಗಿದ್ದು, ಇದರ ಸೂಕ್ಷತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಸರಸ್ವತಿ ಅವರು ಜೆಜೆ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ.ರೇಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಮಿತಿಯ ಸದಸ್ಯೆ ಎಂ.ವಿ. ಪ್ರತಿಭಾ ಅವರು ಪ್ರಾಸ್ತಾವಿಕವಾಗಿ ನುಡುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್.ಹೊನ್ನಳ್ಳಿ, ಸಮಿತಿ ಸದಸ್ಯರಾದ ಶೀಲಾ ಸುರೇಶ್, ರೇಣುಕಮ್ಮ ಉಪಸ್ಥಿತರಿದ್ದರು