ಕುವೆಂಪು ವಿವಿಯಲ್ಲಿ ಆನೆಗಳ ವಾಕಿಂಗ್ 

ಶಂಕರಘಟ್ಟ : ಇಷ್ಟು ದಿನ ಕುವೆಂಪು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡೋದಕ್ಕೆ ವಿದ್ಯಾರ್ಥಿಗಳು ಬರ್ತಾ ಇದ್ರು. ಆದ್ರೀಗ ಆನೆಗಳೂ ಸಹ ವಿವಿ ಕ್ಯಾಂಪಸ್‌ಗೆ ಎಂಟ್ರಿ ಕೊಟ್ಟಿವೆ. ಆಹಾರ ಹುಡುಕಿಕೊಂಡು ಬಂದವೋ ಏನೋ ಗೊತ್ತಿಲ್ಲ. ಕಳೆದ ರಾತ್ರಿ ೨ ಆನೆಗಳು ಎಂಟ್ರಿ ಕೊಟ್ಟು ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿವೆ. 

ಭಾನುವಾರ ಸಂಜೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಮೊದಲು ಕಾಸಿಕೊಂಡಿವೆ. ಬಳಿಕ ಸಂಜೆ 7.30ರ ಹೊತ್ತಿಗೆ ಕುವೆಂಪು ಪ್ರತಿಮೆ, ಗ್ರಂಥಾಲಯದ ಮುಂದೆ ನಡೆದಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೆಕ್ಯೂರಿಟಿ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಿಂದ ಹೊರಬರದಂತೆ ಸೂಚನೆ ನೀಡಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಕಾರ್ಯ ಕೈಗೊಂಡು ವಿದ್ಯಾರ್ಥಿಗಳಲ್ಲಿ ಧೈರ್ಯ ಮೂಡಿಸಿದರು. ಕತ್ತಲಾದ ನಂತರದಿಂದ ಬೆಳಗ್ಗೆ 7 ಗಂಟೆಯ ತನಕ ವಿವಿ ಆವರಣದಲ್ಲಿ ಯಾರೂ ಓಡಾಡುವ ಹಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮೈಕ್‌ನಲ್ಲಿ ಅನೌನ್ಸ್ ಮಾಡಿದ್ದಾರೆ. ಕುವೆಂಪು ವಿವಿ ಕ್ಯಾಂಪಸ್ ಸುತ್ತಮುತ್ತ ಇರುವ ಜನರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಲಾಗಿದೆ. ಇಷ್ಟು ವರ್ಷಗಳ ಬಳಿಕ ಕಾಡಾನೆ ಪ್ರತ್ಯಕ್ಷವಾಗಿರೋದು ನಿಜಕ್ಕೂ ಆತಂಕಪಡುವ ವಿಚಾರವಾಗಿದೆ.