ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್‌ಐಆರ್ : ಶಿವಮೊಗ್ಗ ಎಸ್ಪಿಗೆ ಬಂತು ಡಿಕೆಶಿ ಕಾಲ್

ಶಿವಮೊಗ್ಗ : ಬಿಜೆಪಿ  ಜಿಲ್ಲಾ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಎಸ್‌ಪಿ ಲಕ್ಷ್ಮೀಪ್ರಸಾದ್‌ಗೆ ಕರೆ ಮಾಡಿ ವಿವರಣೆ ಕೇಳಿದ್ದಾರೆ.

ಗುರುವಾರ ವಿಧಾನ ಸೌಧದಲ್ಲಿ ಕೆ.ಎಸ್.ಈಶ್ವರಪ್ಪ ಅಸಂವಿಧಾನಿಕವಾಗಿ ನಡೆದಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದರು. ಈ ವೇಳೆ ೪೦ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿ 15 ಜನರ ಮೇಲೆ ಸುಮೋಟೋ ಅಧಿಕಾರದಲ್ಲಿ ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಆದ್ರೆ ಶುಕ್ರವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ರ್‍ಯಾಲಿ ಮಾಡುವ ಮೂಲಕ ಸ್ವಾಗತಿಸಿದ್ದರು. ಈ ವೇಳೆ 144ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಯಾರನ್ನು ಬಂಧಿಸಿಲ್ಲ ಎಂದು ಕಾಂಗ್ರೆಸಿಗರು ಆರೋಪಿಸಿದರು.

ಈ ವಿಚಾರವಾಗಿ ಶಿವಮೊಗ್ಗ ಎಸ್ಪಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಹುಡಗರ ಮೇಲೆ ಎಫ್‌ಐಆರ್ ಹಾಕಿದ್ದೀರಿ. ಅದೇ ರೀತಿಯಾಗಿ ರ್‍ಯಾಲಿ ಮಾಡಿರುವ ಬಿಜೆಪಿ ಹುಡುಗರ ಮೇಲೆ ಎಫ್‌ಐಆರ್ ದಾಖಲಾಗಿಲ್ವ ಎಂದು ಪ್ರಶ್ನಿಸಿದರು. ಜೊತೆಗೆ ಅವರ ಮೇಲು ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.