ಶಿವಮೊಗ್ಗದಲ್ಲಿ ಮತ್ತೆ ಆರಂಭವಾದ ಸರಗಳ್ಳರ ಕಾಟ : ಒಂಟಿ ಮಹಿಳೆಯರೇ ಟಾರ್ಗೇಟ್

ಶಿವಮೊಗ್ಗ : ನಗರದಲ್ಲಿ ಮತ್ತೆ ಸರಗಳ್ಳರ ಕೈ ಚಳಕ ಜೋರಾಗಿದೆ. ಒಂದೇ ದಿನ ಸರಣಿ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಒಂದು ಗಂಟೆ ಅವಧಿಯಲ್ಲಿ ನಾನಾ ಕಡೆ ಸರಗಳ್ಳತನ, ಪರ್ಸ್ ಕಳವು ಪ್ರಕರಣ ವರದಿಯಾಗಿವೆ.

ಕೃಷ್ಣಾ ಕೆಫೆ ಪಕ್ಕದ ಓಲ್ಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಎಲಿಜಬೆತ್ ಕ್ಯಾಸ್ಟಲಿನೋ ಎಂಬುವವರ ಕೊರಳಲಿದ್ದ 35 ಗ್ರಾಂ ಚಿನ್ನದ ಸರವನ್ನ ಕದ್ದೊಯ್ಯಲಾಗಿದೆ. ಇದರ ಮೌಲ್ಯ ಸುಮಾರು 1.57 ಲಕ್ಷ ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಹೊಸಮನೆ ಬಡಾವಣೆಯ ಚರ್ಚ್ ಬಳಿ ಮಂಗಳಾ ಎಂಬುವವರ ಕೊರಳಲ್ಲಿದ್ದ 55 ಗ್ರಾಂ ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರ ಮೌಲ್ಯ 2.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಕುರಿತಾಗಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಶುಭಂ ಹೊಟೇಲ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ನೇತ್ರಾವತಿ ಎಂಬುವವರ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಗನೊಂದಿಗೆ ಶಾಪಿಂಗ್‌ಗೆ ಬಂದಾಗ ಘಟನೆ ಸಂಭವಿಸಿದೆ. ಪರ್ಸ್‌ನಲ್ಲಿ 8 ಸಾವಿರ ರೂ. ನಗದು, 11 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಇತ್ತು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಸರಗಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಗಾಂಧಿ ನಗರದಲ್ಲಿ ಮಹಿಳೆಯೊಬ್ಬರ ಸರಗಳ್ಳತನಕ್ಕೆ ವಿಫಲ ಯತ್ನವಾಗಿದೆ.

ಅಂದಾಜು 25 ರಿಂದ 30 ವರ್ಷದೊಳಗಿನ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಸರಣಿ ಸರಗಳ್ಳತನ ಮಾಡಿದ್ದಾರೆ. ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿದ್ದು ಕದೀಮರ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸರಣಿ ಸರಗಳ್ಳತನ ಪ್ರಕರಣದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಬಿಗಿ ಗಸ್ತು ಆರಂಭಿಸಿದ್ದಾರೆ. ಹಲವು ಕಡೆ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.