ಶಿವಮೊಗ್ಗ : ಅಡಿಕೆ ನಿಷೇಧ ಕುರಿತು ಭಾರತ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮಾನ್ಸೂಕ್ ಮಾಂಡವೀಯ ಹೇಳಿಕೆ ನೀಡಿದ್ದರು.
ಇವರ ಈ ಹೇಳಿಕೆಯನ್ನ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘ ಖಂಡಿಸಿದೆ. ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ, ಕೇಂದ್ರ ಸಚಿವರ ಈ ಹೇಳಿಕೆಯನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಭಾರತದ ಲಕ್ಷಾಂತರ ಅಡಿಕೆ ಬೆಳೆಗಾರರ ಗಮನಕ್ಕೆ ತಾರದೆ, ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಅಡಿಕೆಯನ್ನ ನಿಷೇಧಿಸಿಲು ಹುನ್ನಾರ ನಡೆಸಿದೆ. ಬಿಜೆಪಿ ಪಕ್ಷದ ಅಡಿಕೆ ಪ್ರಕೋಷ್ಠ, ಕರ್ನಾಟಕ ರಾಜ್ಯ ಅಡಿಕೆ ಕಾರ್ಯ ಪಡೆ, ಸಹಕಾರ ಭಾರತೀಯ ಅಧಿಪತ್ಯದಲ್ಲಿರುವ ಮ್ಯಾಮ್‌ಕೋಸ್, ಕ್ಯಾಮ್ಕೋ ಹಾಗೂ ರಾಜ್ಯದ 25 ಸಂಸದರು ಅಡಿಕೆ ಔಷಧೀಯ ಗುಣ ಮತ್ತು ಅದರ ಧಾರ್ಮಿಕ ಮಹತ್ವದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ವಿಫಲವಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ಇದು ಸಾಬೀತಾಗಿದೆ ಎಂದು ಆರೋಪಿಸಿದರು.