ಶಿವಮೊಗ್ಗ : ರಸ್ತೆಯಲ್ಲಿ ಅಡ್ಡ ಬಂದ ಹಾವಿನ ಜೀವ ಉಳಿಸಲು ಹೋದ ವ್ಯಕ್ತಿಯು ತನ್ನ ಹೆಂಡತಿಯ ಜೀವವನ್ನೇ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಗಾಜನೂರು ಬಳಿ ತುಂಗಾ ನದಿ ಎಡದಂಡೆ ಹತ್ತಿರ ನಡೆದಿದೆ.
ಹೌದು, ಚೇತನ್ ಎಂಬುವರು ಗಾಜನೂರಿನ ನವೋದಯ ಶಾಲೆಯಲ್ಲಿ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದರು. ಈ ವೇಳೆ ಈತನಿಗೆ ತನ್ನ ತಾಯಿಯ ಅನಾರೋಗ್ಯದ ವಿಚಾರ ತಿಳಿದಿದೆ. ತಕ್ಷಣವೇ ತನ್ನ ಹೆಂಡತಿ ಸುಷ್ಮಾ ಜೊತೆ ಕಾರಿನಲ್ಲಿ ತುಮಕೂರಿಗೆ ಹೊರಟಿದ್ದಾನೆ. ಅವಸರದಲ್ಲಿ ಕಾರು ಚಾಲನೆ ಮಾಡುತ್ತಿರುವಾಗ ಹಾವೊಂದು ರಸ್ತೆಗೆ ಅಡ್ಡ ಬಂದಿದೆ.
ಹಾವನ್ನ ತಪ್ಪಿಸಲು ಹೋಗಿ ಏಕಾಏಕಿ ಕಾರಿನ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ಚೇತನ್ ಸಹಾಯಕ್ಕಾಗಿ ಕೂಗಿದ್ದಾನೆ. ಆದ್ರೆ ರಾತ್ರಿ ವೇಳೆಯಾಗಿದ್ದರಿಂದ ಆ ಸಮಯದಲ್ಲಿ ತಕ್ಷಣವೇ ಸಹಾಯಕ್ಕೆ ಯಾರೂ ಬಂದಿಲ್ಲ. 1 ಗಂಟೆಯ ನಂತರ ಗಾಜನೂರಿನ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ಸಹಾಯ ಮಾಡುವಷ್ಟರಲ್ಲಿ ಸುಷ್ಮಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ನಂತರ ಸುಷ್ಮಾಳ ಮೃತದೇಹವನ್ನ ನಾಲೆಯಿಂದ ಹೊರ ತೆಗೆಯಲಾಗಿದೆ. ಈ ಕುರಿತಾಗಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.