ತೀರ್ಥಹಳ್ಳಿಯಲ್ಲಿ ಸುಟ್ಟ ಕಾರು - ವ್ಯಕ್ತಿಯ ಮೃತದೇಹ ಪತ್ತೆ 

ತೀರ್ಥಹಳ್ಳಿ: ತಾಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಟ್ಲುಗೋಡು ಎಂಬ ಹಳ್ಳಿಯ ಸನಿಹವಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕೆಲವೇ ದಿನಗಳ ಹಿಂದೆ ಸುಟ್ಟು ಕರಕಲಾಗಿರಬಹುದಾದ ಮಾರುತಿ ಕಂಪನಿಯ ಸ್ವಿಫ್ಟ್ ಕಾರೊಂದು ಪತ್ತೆಯಾಗಿದೆ.

ಅದರೊಳಗೆ ಒಬ್ಬ ವ್ಯಕ್ತಿಯ ದೇಹ ಕೂಡ ಪೂರ್ಣ ಪ್ರಮಾಣದಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ದರಗು, ಉರುವಲು ಸೌದೆಗಾಗಿ ಕೆಲವು ಮಂದಿ ಗ್ರಾಮಸ್ಥರು ಅತ್ತ ಹೋಗಿದ್ದಾಗ, ಬಣ್ಣ, ನೋಂದಣಿ ಸಂಖ್ಯೆಯ ಗುರುತೂ ಸಿಗದಷ್ಟರ ಮಟ್ಟಿಗೆ ಬೆಂಕಿಗಾಹುತಿಯಾದ ಕಾರು ಮತ್ತು ವ್ಯಕ್ತಿಯ ದೇಹ ಕಣ್ಣಿಗೆ ಬಿದ್ದಿದೆ. ಗಾಬರಿಯಾದ ಅವರು ಪೊಲೀಸ್ ಇಲಾಖೆಗೆ ತಕ್ಷಣವೇ ಸುದ್ದಿ ಮುಟ್ಟಿಸಿದ್ದಾರೆ. ತಡ ಮಾಡದೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ, ಸುಟ್ಟ ಕಾರಿನ ಮತ್ತು ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಸಕ್ರಿಯವಾಗಿದೆ. ಯಾವಾಗ, ಎಲ್ಲಿಂದ, ಯಾಕೆ, ಕೊಲೆಯಾ, ಕೊಲೆ ಮಾಡಿದವರು ಮತ್ತು ಆದವನು ಯಾರು, ಕೊಲೆಯೇ ಆಗಿದ್ದರೆ ಕಾರಣವೇನು ಎಂಬಿತ್ಯಾದಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಗಳಿಗೆ ಪೊಲೀಸರ ತನಿಖೆಯ ನಂತರವೇ ಉತ್ತರ ಸಿಗಲಿದೆ. ಆ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.